ಜಿಪಂನಿಂದ ಹೋಬಳಿ ಕೇಂದ್ರಗಳಲ್ಲಿ ಜನಸ್ಪಂದನಾ ಕಾರ್ಯಕ್ರಮ: ಚಿಕ್ಕಮಗಳೂರು ಜಿಪಂ ಸಿಇಒ ಸತ್ಯಭಾಮ

Update: 2018-09-06 18:16 GMT

ಚಿಕ್ಕಮಗಳೂರು, ಸೆ.6: ಜಿಲ್ಲಾಪಂಚಾಯತ್ ಅನ್ನು ಜನಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ಜನರ ಬಳಿಗೆ ತೆರಳಿ ಸಮಸ್ಯೆ ಆಲಿಸುವ, ಸರಕಾರದ ಸವಲತ್ತುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಜನಸ್ಪಂದನಾ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ವತಿಯಿಂದ ರೂಪಿಸಲಾದ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ಸೆ.18ರಂದು ಚಾಲನೆ ನೀಡಲಾಗುತ್ತಿದೆ ಎಂದು ಜಿಪಂ ಸಿಇಒ ಸತ್ಯಾಭಾಮ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತ್ ಕಚೇರಿಯಲ್ಲಿನ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನರಿಗಾಗಿ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದ್ದು, ಇವುಗಳ ಪೈಕಿ ಕೆಲವು ಯೋಜನೆಗಳ ಜಿಲ್ಲಾಪಂಚಾಯತ್ ಮೂಲಕವೇ ಜಾರಿಯಾಗುತ್ತಿವೆ. ಆದರೆ ಈ ಬಗ್ಗೆ ಗ್ರಾಮೀಣ ಜನರಿಗೆ ಮಾಹಿತಿ ಸಿಗದೇ ಸರಕಾರಿ ಸೌಲಭ್ಯಗಳು ಗ್ರಾಮೀಣ ಜನರನ್ನು ತಲುಪುತ್ತಿಲ್ಲ. ಜಿಲ್ಲಾ ಪಂಚಾಯತ್ ಮೂಲಕ ಆಯೋಜಿಸಲಾಗುತ್ತಿರುವ ಜನಸ್ಪಂದನ ಕಾರ್ಯಕ್ರಮ ಇಂತಹ ಸರಕಾರಿ ಸೌಲಭ್ಯಗಳ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಮಾಹಿತಿ ನೀಡಲಾಗುವುದು. ಸಾರ್ವಜನಿಕರು ಸರಕಾರದ 18 ಇಲಾಖೆಗಳಿಗೂ ಸಂಬಂಧಿಸಿದಂತೆ ಜನಸ್ಪಂದನಾ ಕಾರ್ಯಕ್ರಮದ ಮೂಲಕ ದೂರು, ಸಮಸ್ಯೆಗಳ ಬಗ್ಗೆ ಮನವಿ ನೀಡಬಹುದು. ಇವುಗಳ ಪೈಕಿ ಸಾಧ್ಯವಿರುವ ಸಮಸ್ಯೆಗಳನ್ನು ಅಂದಿನ ಸಭೆಯಲ್ಲೇ ಬಗೆಹರಿಸಲು ಪ್ರಯತ್ನಿಸಲಾಗುವುದು. ಬಾಕಿ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಲಾಗುವುದು ಎಂದರು.

ಜಿಲ್ಲೆಯ 34 ಹೋಬಳಿಗಳ ವ್ಯಾಪ್ತಿಯಲ್ಲಿ ನಡೆಯುವ ಈ ಕಾರ್ಯಕ್ರಮ ಆಯಾ ತಾಲೂಕುಗಳ ಶಾಸಕರ ನೇತೃತ್ವದಲ್ಲಿ ನಡೆಯಲಿದೆ. ಸಭೆಯಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಗ್ರಾಪಂ, ತಾಪಂ, ಜಿಪಂ ಜನಪ್ರತಿನಿಧಿಗಳು ಹಾಗೂ ಜಿಲ್ಲಾ, ತಾಲೂಕು ಮಟ್ಟದ ವಿವಿಧ ಇಲಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದ ಅವರು, ಮೊದಲ ಜನಸ್ಪಂದನಾ ಕಾರ್ಯಕ್ರಮವನ್ನು ತರೀಕೆರೆ ತಾಲೂಕಿನ ದೋರನಾಳು ಗ್ರಾಮದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಸೆ.18ರಂದು ತಾಲೂಕಿನ ಕಸಬಾ ಹೋಬಳಿಯ ದೋರನಾಳು ಗ್ರಾಮದಲ್ಲಿ ಬೆಳಗ್ಗೆ 10ಕ್ಕೆ ಜನಸ್ಪಂದನಾ ಕಾರ್ಯಕ್ರಮ ನಡೆಯಲಿದೆ. ಎರಡನೇ ಜನಸ್ಪಂದನಾ ಕಾರ್ಯಕ್ರಮವನ್ನು ಕೊಪ್ಪ ತಾಲೂಕಿನ ಮೇಗುಂದಾ ಹೋಬಳಿಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರ ನೇತೃತ್ವದಲ್ಲಿ ಸೆ.28ರಂದು ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮಗಳ ನೋಡಲ್ ಅಧಿಕಾರಿಯನ್ನಾಗಿ ಕಲ್ಲಪ್ಪ ಎಂಬವರನ್ನು ಈಗಾಗಲೇ ನೇಮಕ ಮಾಡಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಆಡಳಿತವನ್ನು ಪಾರದರ್ಶಕವನ್ನಾಗಿಸುವ ನಿಟ್ಟಿನಲ್ಲಿ ನ.1ರಿಂದ ಪೇಪರ್‍ಲೆಸ್ (ಇ-ಆಫೀಸ್) ಕಚೇರಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ಸಿಬ್ಬಂದಿ, ಅಧಿಕಾರಿಗಳಿಗೆ ತರಬೇತಿ ನೀಡಿ, ಇಎಂಡಿ ಸೃಷ್ಟಿಸಲಾಗಿದೆ. ಕಚೇರಿಯಲ್ಲಿದ್ದ ಸುಮಾರು 11 ಸಾವಿರ ಕಡತಗಳನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್‍ಗಳಲ್ಲಿ ಸಂಗ್ರಹಿಸಿಡಲಾಗಿದ್ದು, ದಿಲ್ಲಿಯ ಎನ್‍ಐಸಿ ಸರ್ವರ್ ಮೂಲಕ ಕಡತ, ದಾಖಲೆಗಳ ನಿರ್ವಹಣೆ, ಸಂಗ್ರಹ ಮಾಡಲಾಗುತ್ತದೆ ಎಂದ ಅವರು, ಈ ಸಂಬಂಧ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮೊದಲ ಹಂತದಲ್ಲಿ ಜಿಪಂ ಕಚೇರಿ ಇ-ಆಪೀಸ್ ಆಗಲಿದೆ, ಬಳಿಕ ತಾಲೂಕು ಪಂಚಾಯತ್‍ಗಳನ್ನೂ ಇದರ ವ್ಯಾಪ್ತಿಗೆ ತರಲಾಗುವುದು ಎಂದು ಇದೇ ವೇಳೆ ಸಿಇಒ ಮಾಹಿತಿ ನೀಡಿದರು.

ಜಿಪಂ ಉಪಾಧ್ಯಕ್ಷ ಕೆ.ಆರ್.ಆನಂದಪ್ಪ ಮಾತನಾಡಿ, ಜನಸ್ಪಂದನಾ ಸಭೆಗಳ ಮುಖ್ಯ ಉದ್ದೇಶ ಸಾರ್ವಜನಿಕರ ಸಮಸ್ಯೆಗಳನ್ನು ಅವರಿದ್ದಲ್ಲಿಯೇ ಹೋಗಿ ಅರಿಯುವುದಾಗಿದೆ. ಸಭೆಯಲ್ಲಿ ಕ್ಷೇತ್ರದ ಶಾಸಕರೂ ಸೇರಿದಂತೆ ವಿವಿಧ ಹಂತದ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಕಾರಿಗಳು ಜನರ ಬಳಿಗೆ ಹೋಗುವುದರಿಂದ ಸಭೆಯಲ್ಲೇ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಅತಿವೃಷ್ಟಿಯಿಂದ ಮಲೆನಾಡು ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಜೀವ ಹಾನಿ ಸೇರಿದಂತೆ ಆಸ್ತಿ, ಬೆಳೆಹಾನಿಯಾಗಿದೆ. ಜಿಲ್ಲೆಯ ಬಯಲುಸೀಮೆ ಭಾಗದ ಎರಡು ತಾಲೂಕು ವ್ಯಾಪ್ತಿಯಲ್ಲಿ ತೀವ್ರ ಬರ ಆವರಿಸಿದೆ. ಜನಸ್ಪಂದನ ಕಾರ್ಯಕ್ರಮದ ಮೂಲಕ ಅತೀವೃಷ್ಟಿ ಮತ್ತು ತೀವ್ರ ಬರದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಸಂತ್ರಸ್ತರಿಂದಲೇ ತಿಳಿದುಕೊಂಡಲ್ಲಿ ಸಮಸ್ಯೆಯ ತೀವ್ರತೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿದೆ. ಪ್ರತೀ ತಿಂಗಳ ಮೊದಲ ಹಾಗೂ ಕಡೆಯ ವಾರದಲ್ಲಿ ಎರಡು ಜನಸ್ಪಂದನಾ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News