ದೇಶದ ಏಕತೆ, ಸಮಗ್ರತೆ, ಸೌಹಾರ್ದಕ್ಕೆ ಪೂರಕ ಶಿಕ್ಷಣ ನೀತಿ ಅಗತ್ಯ: ಶಾಸಕ ಟಿ.ಡಿ.ರಾಜೇಗೌಡ

Update: 2018-09-06 18:21 GMT

ಕೊಪ್ಪ, ಸೆ.6: ಶಿಕ್ಷಣದಲ್ಲಿ ಕ್ರಾಂತಿಯಾದರೆ ದೇಶ ಉನ್ನತ ಸ್ಥಿತಿಗೆ ತಲುಪುತ್ತದೆ. ಆದ್ದರಿಂದ ಸ್ವಾತಂತ್ರ್ಯ ನಂತರದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.

ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬಾಳಗಡಿ ಒಕ್ಕಲಿಗ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತಿ-ಮತ-ಧರ್ಮ-ದೇಶದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಉಪನ್ಯಾಸಗಳಿಗೆ ಇಂದಿನ ದಿನಗಳಲ್ಲಿ ಹೆಚ್ಚು ಆದ್ಯತೆ ಸಿಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಇದಕ್ಕೆ ಅವಕಾಶ ನೀಡದೆ ದೇಶದ ಏಕತೆ, ಸಮಗ್ರತೆ ಮತ್ತು ಸೌಹಾರ್ದತೆಗೆ ಪೂರಕವಾದ ವಾತಾವರಣ ಕಲ್ಪಿಸಬೇಕಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕಾದ ನಿಟ್ಟಿನಲ್ಲಿ ಶಿಕ್ಷಕರಿಗೂ ವಸ್ತ್ರಸಂಹಿತೆ ಇರಬೇಕು. ಇಲಾಖೆಯ ಕೆಲಸದ ಜೊತೆಗೆ ಬೇರೆ ಇಲಾಖೆಯ ಕೆಲಸಗಳಲ್ಲೂ ಶಿಕ್ಷಕರನ್ನು ಜೋಡಿಸಿಕೊಳ್ಳುವುದರಿಂದ ಇಂದಿನ ದಿನಗಳಲ್ಲಿ ಶಿಕ್ಷಕರಿಗೆ ಕಾರ್ಯದೊತ್ತಡ ಜಾಸ್ತಿಯಾಗುತ್ತದೆ. ಇದರ ಜೊತೆಗೆ ಇನ್ನು ಹಲವಾರು ಸಮಸ್ಯೆಗಳನ್ನು ಶಿಕ್ಷಕರು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಶಾಸನ ಸಭೆಗಳಲ್ಲಿ ಪ್ರಸ್ತಾಪಿಸಿ ಶಿಕ್ಷಕರ ಹಿತಾಸಕ್ತಿಗಾಗಿ ಕೆಲಸ ಮಾಡುತ್ತೇನೆ ಎಂದರು.

ಉಪನ್ಯಾಸ ನೀಡಿದ ಚಿಕ್ಕಮಗಳೂರಿನ ಮನೋವೈದ್ಯೆ ಮಮತಾ ಮಹೇಶ್, ಶಿಕ್ಷಣದ ಬಗ್ಗೆ ಆಸಕ್ತಿ, ಕುತೂಹಲವಿಲ್ಲದ ಶಿಕ್ಷಕ ಸಮಾಜಕ್ಕೆ ಬಾಂಬ್ ಇದ್ದಂತೆ. ಮಗುವಿನ ಆಸಕ್ತಿಯನ್ನು ತಡೆಯುವುದು ಅವರ ಮೇಲೆ ಆಸಿಡ್ ಎರಚಿದಂತೆ. ಇಂತವರಿಂದ ಅನಾಹುತವೇ ಹೆಚ್ಚು. ಶಿಕ್ಷಕರು ತಮ್ಮ ಕರ್ತವ್ಯವನ್ನು ಪ್ರೀತಿಸಿ, ಪ್ರತಿದಿನ ಹೊಸತನ್ನು ಹುಡುಕುವಂತ ಮನಸ್ಥಿತಿಯವರಾಗಿರಬೇಕು. ವಿದ್ಯಾರ್ಥಿಗಳಲ್ಲಿರುವ ಒಳ್ಳೆಯದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವಿಮರ್ಶೆ ಮತ್ತು ರಚನಾತ್ಮಕ ಟೀಕೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಗುಣವನ್ನು ಮಕ್ಕಳಲ್ಲಿ ಬೆಳಸಬೇಕು ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತನಾಡಿ, ಇಂದು ಮನುಷ್ಯ ಮನುಷ್ಯನಾಗಿ ಬದುಕುವಂತ ಶಿಕ್ಷಣದ ಅಗತ್ಯ ಇದೆ. ಸಂಬಳಕ್ಕಾಗಿ, ಪ್ರಶಸ್ತಿಗಾಗಿ ಕೆಲಸ ಮಾಡದೇ ಕೆಲಸ ಮಾಡಿ. ಶಿಕ್ಷಕರಂತೆ ಮಕ್ಕಳೂ ಓದು ಬರಹ ಕಲಿತುಕೊಂಡಾಗ ಶಿಕ್ಷಕರ ಶ್ರಮ ಸಾರ್ಥಕವಾಗುತ್ತದೆ. ದೇಶದ ಉಜ್ವಲ ಭವಿಷ್ಯವನ್ನು ನಿರ್ಮಾಣ ಮಾಡುವಂತ ಮಕ್ಕಳನ್ನು ಸಿದ್ದಗೊಳಿಸಿ ಎಂದು ಕರೆನೀಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದ ಬೀರೂರಿನ ಅಚ್ಯುತರಾವ್ ಹಾಗೂ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇಲಾಖೆಯಲ್ಲಿ ವಿವಿಧ ಸ್ಥರದ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಸಾಧನೆ ಮಾಡಿದ ರಾಜಪ್ಪರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್‍ಎಸ್‍ಎಲ್‍ಸಿಯಲ್ಲಿ ತಾಲೂಕಿಗೆ ಅತೀ ಹೆಚ್ಚು ಅಂಕಗಳಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ಹನುಮಂತರಾಯಪ್ಪ ದತ್ತಿನಿಧಿ ಪ್ರತಿಭಾ ಪುರಸ್ಕಾರ ನೀಡಲಾಯಿತು. 14 ಮಂದಿ ನಿವೃತ್ತ ಶಿಕ್ಷಕರನ್ನು ಸನ್ಮಾನಸಿಲಾಯಿತು.

ಜಿಲ್ಲೆಯ ಎಂಟು ಶೈಕ್ಷಣಿಕ ಬ್ಲಾಕ್‍ಗಳಲ್ಲಿ ಪ್ರೌಢ, ಹಿರಿಯ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರನ್ನು ಅಭಿನಂದಿಸಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಇತ್ತೀಚೆಗೆ ಬೈಕ್ ಅಪಘಾತದಲ್ಲಿ ನಿಧನರಾದ ತಾಲೂಕಿನ ಭಂಡಿಗಡಿ ಎಚ್.ಹೊಸೂರು ಶಾಲಾ ಶಿಕ್ಷಕ ಕುಮಾರ್ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶಿಕ್ಷಕರಿಗೆ ವೈದ್ಯಕೀಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. 

ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ದಿವ್ಯ ದಿನೇಶ್, ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಂತಿ ನಾಗರಾಜ್, ಉಪಾಧ್ಯಕ್ಷೆ ಜೆ.ಎಸ್. ಲಲಿತಾ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಅನುಸೂಯ ಕೃಷ್ಣಮೂರ್ತಿ, ಉಪಾಧ್ಯಕ್ಷ ಎ. ದಿವಾಕರ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ, ಡಿಡಿಪಿಐ ಪ್ರಸನ್ನಕುಮಾರ್, ಉಪವಿಭಾಗಾಧಿಕಾರಿ ಅಮರೇಶ್, ತಹಶೀಲ್ದಾರ್ ತನುಜಾ ಟಿ. ಸವದತ್ತಿ, ಬಿಇಒ ಕೆ. ಗಣಪತಿ, ಸಿಇಒ ಕೆ.ವಿ. ಸುಬ್ರಹ್ಮಣ್ಯ, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ರಾಜಪ್ಪ ಹಾಗೂ ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News