ಬೆಳಗಾವಿ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತವಿಲ್ಲ: ಖಂಡ್ರೆ

Update: 2018-09-07 06:56 GMT

ಬೆಳಗಾವಿ, ಸೆ. 7: ಬೆಳಗಾವಿ ಕಾಂಗ್ರೆಸ್ ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗೆ  ಒಮ್ಮತದ  ಆಯ್ಕೆ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ  ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು "ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಹುದ್ದೆಗೆ  ಮಹಾದೇವ್ ಪಾಟೀಲ್  ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ  ಬಾಪು ಸಾಬ್ ಜಮಾದಾರ್  ಅವರನ್ನು ಆಯ್ಕೆ  ಮಾಡಿದ್ದೇವೆ. ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ಹುದ್ದೆಗಳಿಗೆ  ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ "ಎಂದು  ಖಂಡ್ರೆ ಪ್ರಕಟಿಸಿದರು.

ಬೆಳಗಾವಿ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತವಿಲ್ಲ. ಪಿಎಲ್ ಡಿ ಬ್ಯಾಂಕ್ ನ ಅಧ್ಯಕ್ಷ  ಮತ್ತು ಉಪಾಧ್ಯಕ್ಷ ರ ಆಯ್ಕೆಗೆ ಸಂಬಂಧಿಸಿ ಉಂಟಾಗಿದ್ದ   ವಿವಾದವನ್ನು ಸೌಹಾರ್ದಯುತವಾಗಿ  ಬಗೆಹರಿಸಲಾಗಿದೆ  ಎಂದು ಅವರು ಹೇಳಿದರು.

ಎಲ್ಲವೂ ಸರಿಯಾಗಿದೆ: ಸತೀಶ್ ಜಾರಕಿಹೊಳಿ

“ನಮ್ಮಲ್ಲಿ   ಯಾವುದೇ ಬಣ ಇಲ್ಲ . ಕಾಂಗ್ರೆಸ್ ಪಕ್ಷದ ಹಿತ ಮುಖ್ಯವಾಗಿದ್ದು, ಪಕ್ಷದ ಹಿತದೃಷ್ಟಿಯಿಂದ ವರಿಷ್ಠರ ಸೂಚನೆ  ಮೇರೆಗೆ  ಸಮಸ್ಯೆಯನ್ನು ಬಗೆ ಹರಿಸಿದ್ದೇವೆ. ಉಗ್ರ ನಿರ್ಧಾರ ಏನು ಇಲ್ಲ. ಎಲ್ಲವೂ ಸರಿಯಾಗಿದೆ.   ಲೋಕಸಭೆ ಚುನಾವಣೆಯನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಲಿದ್ದೇವೆ " ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ವಿವಾದ ಸುಖಾಂತ್ಯವಾಗಿರುವುದರಿಂದ ಸಂತಸವಾಗಿದೆ: ಹೆಬ್ಬಾಳ್ಕರ್ 

ನಮ್ಮದು ಅಲ್ಲ ಅವರದ್ದು ಅಲ್ಲ ಪಿಎಲ್ ಡಿ  ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಿಗೆ ಒಮ್ಮತದ ಆಯ್ಕೆ ನಡೆದಿದೆ. ವಿವಾದ ಸುಖಾಂತ್ಯವಾಗಿರುವುದರಿಂದ ಸಂತಸವಾಗಿದೆ.  ವೈಯಕ್ತಿಕ ಟೀಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲವನ್ನು  ಭಗವಂತ ನೋಡಿಕೊಳ್ಳುತ್ತಾನೆ ಎಂದು  ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್  ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News