ಬೆಳಗಾವಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ –ಉಪಾಧ್ಯಕ್ಷರ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೀ ಬಣಕ್ಕೆ ಜಯ

Update: 2018-09-07 12:28 GMT

ಬೆಳಗಾವಿ, ಸೆ. 7: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ವೈಮನಸ್ಸು ಶಮನಗೊಳಿಸುವಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ತೀವ್ರ ಕುತೂಹಲ ಸೃಷ್ಟಿಸಿದ್ದ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಬಣ ಗೆಲುವು ಸಾಧಿಸಿದೆ.

ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೂಚನೆ ಹಿನ್ನೆಲೆಯಲ್ಲಿ ಬೆಳಗಾವಿಗೆ ತೆರಳಿದ್ದ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಡುವೆ ಉಂಟಾಗಿದ್ದ ಗೊಂದಲವನ್ನು ಬಗೆಹರಿಸಿದ್ದಾರೆ.

ಬಹು ನಿರೀಕ್ಷೆಯ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹಾದೇವ ಪಾಟೀಲ ಮರಾಠಾ ಸಮಾಜದವರು ಹಾಗೂ ಉಪಾಧ್ಯಕ್ಷ ಬಾಪುಸಾಬ ಜಮಾದಾರ ಮುಸ್ಲಿಂ ಸಮುದಾಯದ ಇಬ್ಬರು ಆಯ್ಕೆಯಾಗಿದ್ದು, ಇವರಿಬ್ಬರೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ಎಂದು ಹೇಳಲಾಗಿದೆ.

ಪಿಎಲ್‌ಡಿ ಬ್ಯಾಂಕ್ ಚುನಾವಣೆ ಮತ್ತು ಸಂಧಾನ ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಇದಕ್ಕೆ ಸಹಕರಿಸಿದ ಇಬ್ಬರು ಮುಖಂಡರನ್ನು ಅಭಿನಂದಿಸುತ್ತೇನೆ. ಇದು ಜಿಲ್ಲಾ ಉಸ್ತುವಾರಿ ಸಚಿವರಿಗೂ ಸಹಮತವಿದೆ. ಅವರೊಂದಿಗೂ ಚರ್ಚೆ ಮಾಡಿದ್ದೇನೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಒಟ್ಟಾಗಿದ್ದು, ಮುಂದೆಯೂ ಒಟ್ಟಾಗಿ ಹೋಗುತ್ತಾರೆಂದು ಭರವಸೆ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲೆಯಲ್ಲಿನ ಎಲ್ಲ ಸಮಸ್ಯೆಗಳನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿದ್ದು, ಎಲ್ಲವನ್ನು ಸೌಹಾರ್ದಯುತವಾಗಿ ಇತ್ಯರ್ಥ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಪ್ರತ್ಯೇಕ ಗುಂಪುಗಳಿಲ್ಲ. ಬದಲಿಗೆ ಕಾಂಗ್ರೆಸ್ ಗುಂಪು ಮಾತ್ರ ಇಲ್ಲಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಂಧಾನ ಸಭೆಯಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಅಲ್ಲದೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಸುದ್ಧಿಗೋಷ್ಠಿಯಲ್ಲಿ ಒಟ್ಟಿಗೆ ಕೂತಿದ್ದರೂ ಪರಸ್ಪರ ಮುಖ ನೋಡಿಕೊಳ್ಳಲಿಲ್ಲ.

‘ಜಿಲ್ಲೆಯ ಎಲ್ಲರ ಒಮ್ಮತದಿಂದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿದ್ದು, ನನ್ನ ವಿರುದ್ಧದ ವೈಯಕ್ತಿಕ ಟೀಕೆಗಳಿಗೆ ನಾನು ಉತ್ತರ ನೀಡುವುದಿಲ್ಲ. ಭಗವಂತ ಎಲ್ಲವನ್ನು ನೋಡಿಕೊಳ್ಳುತ್ತಾನೆ. ಚುನಾವಣೆಯಲ್ಲಿ ಯಾರ ಗೆಲುವು ಇಲ್ಲ, ಸೋಲು ಇಲ್ಲ. ಪಕ್ಷದ ಮುಖಂಡರ ಸಮ್ಮುಖದಲ್ಲಿ ಎಲ್ಲವೂ ಸುಖಾಂತ್ಯವಾಗಿದೆ’

-ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕಿ

‘ಕೆಪಿಸಿಸಿ ಕಾರ್ಯಾಧ್ಯಕ್ಷರು ಎಲ್ಲ ಸಮಸ್ಯೆ ಬಗೆಹರಿಸಿದ್ದು, ಪಕ್ಷದ ಹಿತದೃಷ್ಟಿಯಿಂದ ಸಮಸ್ಯೆ ಪರಿಹಾರವಾಗಿದೆ. ಕೆಪಿಸಿಸಿ ಅಧ್ಯಕ್ಷರೂ ಮಾತನಾಡಿದ್ದಾರೆ. ಅವಿರೋಧ ಆಯ್ಕೆಯಾಗಿದೆ. ಎರಡೂ ಕಡೆಗಳಲ್ಲೂ ಸಂಪರ್ಕ ಕೊರತೆ ಉಂಟಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ ಚರ್ಚಿಸಿದ್ದೇವೆ. ಲಕ್ಷ್ಮಿ ಜೊತೆಯೂ ಚರ್ಚೆ ಮಾಡಿದ್ದೇವೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಕ್ಷದ ಚಿಹ್ನೆ ಬಂದಾಗ ಒಟ್ಟಾಗಿ ಕೆಲಸ ಮಾಡುತ್ತೇವೆ’

-ಸತೀಶ್ ಜಾರಕಿಹೊಳಿ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News