ಸಿ.ಟಿ ರವಿಯಿಂದ ಕಸ ಸಂಗ್ರಹಣಾ ಆಟೊಗಳ ದುರುಪಯೋಗ: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ದೇವರಾಜ್ ಆರೋಪ

Update: 2018-09-07 11:55 GMT

ಚಿಕ್ಕಮಗಳೂರು, ಸೆ.7: ನಗರದಲ್ಲಿ ಸ್ವಚ್ಛ ಭಾರತ ಯೋಜನೆ ಕಾರ್ಯಕ್ರಮ ಹಳ್ಳ ಹಿಡಿದಿದ್ದು, ಗುತ್ತಿಗೆಗೆ ನೀಡಲಾದ ಕಸ ಸಂಗ್ರಹಣಾ ಆಟೊಗಳ ಮೇಲೆ ಶಾಸಕ ಸಿ.ಟಿ.ರವಿ ಅವರು ತಮ್ಮ ಭಾವಚಿತ್ರ ಹಾಕಿಕೊಂಡು ಚುನಾವಣಾ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಸದಸ್ಯರು ನಗರಸಭೆಯ ನುರಿತ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕುವ ಮೂಲಕ ಅವರ ಅನ್ನಕ್ಕೆ ಕನ್ನ ಹಾಕಿದ್ದಾರೆ. ನಗರಸಭೆ ಆಡಳಿತ ಸ್ವಚ್ಛ ಭಾರತ ಯೋಜನೆಯನ್ನು ನಗರದಲ್ಲಿ ಸಮರ್ಪಕವಾಗಿ ಜಾರಿಮಾಡುವಲ್ಲಿ ವಿಫಲವಾಗಿದೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ವತಿಯಿಂದ ಕಸ ಸಂಗ್ರಹಣೆ ಮಾಡಲು ಕೆಲ ಗೂಡ್ಸ್ ಆಟೊಗಳನ್ನು ಗುತ್ತಿಗೆ ಪಡೆಯಲಾಗಿದ್ದು, ಈ ಆಟೊಗಳ ಮೇಲೆ ಶಾಸಕ ಸಿ.ಟಿ ರವಿ ಅವರು ತಮ್ಮ ಭಾವಚಿತ್ರ ಹಾಕಿಕೊಳ್ಳುವ ಮೂಲಕ ಕಸ ಸಂಗ್ರಹಣೆ ವಿಷಯದಲ್ಲೂ ಚುನಾವಣಾ ರಾಜಕಾರಣ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಬೇಕಾದ ನಗರಸಭೆ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ಮೌನಕ್ಕೆ ಶರಣಾಗಿರುವುದು ವಿಪರ್ಯಾಸ ಎಂದ ಅವರು, ಶಾಸಕರು ಹಾಗೂ ಬಿಜೆಪಿ ಸದಸ್ಯರಿಂದ ನಗರದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ನಗರಸಭೆಯ ನುರಿತ ಪೌರ ಕಾಮಿಕರನ್ನು ಬಿಜೆಪಿ ಸದಸ್ಯರ ಕುಮ್ಮಕ್ಕಿನಿಂದ ವಿನಾಕಾರಣ ಕೆಲಸದಿಂದ ತೆಗೆದು ಹಾಕಿಲಾಗಿದೆ. ಆಡಳಿತ ಪಕ್ಷದ ಸದಸ್ಯರು ತಮಗೆ ಬೇಕಾದವರನ್ನು ಕೆಲಸಕ್ಕೆ ನೇಮಿಸಿಕೊಂಡಿರುವುದರಿಂದ ಕೆಲ ಪೌರಕಾರ್ಮಿಕರು ಸದಸ್ಯರ ಬೆಂಬಲದಿಂದಾಗಿ ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಇದರಿಂದಾಗಿ ಕಸ ಸಂಗ್ರಹಣಾ ವಾಹನಗಳು ಬರುವ ತನಕ ಮಹಿಳೆಯರು ಕಾದು ನಿಂತು ವಾಹನಕ್ಕೆ ಖುದ್ದು ಕಾಸ ಸುರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಕಸ ಸಂಗ್ರಹಣಾ ವಾಹನಗಳ ಮೇಲೆ ಶಾಸಕ ಸಿ.ಟಿ.ರವಿ ಅವರು ಯಾವ ಮಾನದಂಡದ ಮೇಲೆ ತಮ್ಮ ಭಾವಚಿತ್ರಗಳನ್ನು ಹಾಕಿದ್ದಾರೆಂಬ ಬಗ್ಗೆ ಸ್ಪಷ್ಟನೆ ನೀಡಬೇಕು. ಅವರಿಗೆ ಮಾನ ಮರ್ಯಾದೆ ಇದ್ದಲ್ಲಿ ಕೂಡಲೇ ಭಾವಚಿತ್ರಗಳನ್ನು ವಾಹನಗಳಿಂದ ತೆಗೆದುಹಾಕಬೇಕು. ನಗರಸಭೆ ಕಾಂಗ್ರೆಸ್ ಸದಸ್ಯರು ಈ ಬಗ್ಗೆ ಪ್ರಶ್ನೆ ಮಾಡಬೇಕೆಂದು ಆಗ್ರಹಿಸಿದ ಅವರು, ಈ ಬಗ್ಗೆ ಜಿಲ್ಲಾಧಿಕಾರಿಗೆ ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಗುವುದು. ಅವರು ಯಾವುದೇ ಕ್ರಮವಹಿಸದಿದ್ದಲ್ಲಿ ಈ ಸಂಬಂಧ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ದೇವರಾಜ್ ಇದೇ ವೇಳೆ ಎಚ್ಚರಿಸಿದರು.

ದಂಧೆಗಳ ಹೀರೋ ಸಿ.ಟಿ.ರವಿ: ನಗರದಲ್ಲಿ ನಡೆಯುತ್ತಿರುವ ಭೂ ಮಾಫಿಯಾ, ಮರಳು ದಂಧೆ, ಕಸ ಸಂಗ್ರಹಣೆ ದಂಧೆ, ಬೀದಿ ಬದಿ ವ್ಯಾಪಾರಿಗಳಿಂದ ಅಧಿಕ ಶುಲ್ಕ ವಸೂಲಿ ದಂಧೆಗಳ ಅಸಲಿ ಹೀರೋ ಶಾಸಕ ಸಿ.ಟಿ.ರವಿ ಎಂದು ವಾಗ್ದಾಳಿ ನಡೆಸಿದ ಅವರು, ಕರಗಡ ಯೋಜನೆ ಕಾಮಗಾರಿಗಳ ತನಿಖೆಗೆ ಸಿಎಂ ಕ್ರಮವಹಿಸಲಿದ್ದಾರೆ. ನಗರದ ಎಂ.ಜಿ.ರಸ್ತೆ, ಅಂಬೇಡ್ಕರ್ ರಸ್ತೆ, ಒಳಚರಂಡಿ ಕಾಮಗಾರಿ ಅವ್ಯವಹಾರದ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ಶಾಸಕ ರವಿ ಅವರ ಅವ್ಯವಹಾರಗಳು ಶೀಘ್ರ ಜನರ ಮುಂದೆ ಬಟಾಬಯಲಾಗಲಿವೆ ಎಂದು ದೇವರಾಜ್ ತಿಳಿಸಿದರು.

ಸಿ.ಟಿ.ರವಿ ಸತ್ಯಹರಿಶ್ಚಂದ್ರನ ತುಂಡಾ..?

ಶಾಸಕ ಸಿ.ಟಿ ರವಿ ಅವರು ಇತ್ತೀಚೆಗೆ ಪ್ರಮಾಣಿಕರಂತೆ ಪೋಸು ಕೊಡುತ್ತಿದ್ದಾರೆ. ಶಾಸಕರಾಗಿದ್ದ 20 ವರ್ಷಗಳಲ್ಲಿ ತೆಪ್ಪಗಿದ್ದ ಅವರು, ಸದ್ಯ ಕರಗಡ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿಗಳಿಗೆ  ವಿಧಾನಪರಿಷತ್ ಸದಸ್ಯರಾದ ಭೋಜೇಗೌಡ, ಧರ್ಮೇಗೌಡ ಅನುದಾನ ಬಿಡುಗಡೆ ಮಾಡಿಸಿದ ಬಳಿಕ ಕಾಮಗಾರಿ ಅವೈಜ್ಞಾನಿಕ ಎಂದು ಪ್ರಾಮಾಣಿಕನಂತೆ ಮಾತನಾಡುತ್ತಿದ್ದಾರೆ. ಈಗ ಜ್ಞಾನೋದಯ ಆದವರಂತೆ ವರ್ತಿಸುತ್ತಿರುವ ಸಿ.ಟಿ ರವಿ ಅವರು ಸತ್ಯಹರಿಶ್ಚಂದ್ರನ ತುಂಡಾ? ಸಿ.ಟಿ.ರವಿಗೆ ತಮ್ಮ ಅಧಿಕಾರವಧಿಯಲ್ಲಿ ಯೋಜನೆ ಅವೈಜ್ಞಾನಿಕ ಎಂಬುದು ತಿಳಿದಿರಲಿಲ್ಲವೇ?, ನಗರದ ರಸ್ತೆಗಳು, ಒಳಚರಂಡಿ ಕಾಮಗಾರಿ ಹದಗೆಟ್ಟಿರುವುದು ಅವರಿಗೆ ತಿಳಿದಿಲ್ಲವೇ? ಎಂದು ಪ್ರಶ್ನಿಸಿದರು.

ಕೋಮುವಾದಿಗಳನ್ನು ದೂರ ಇಡಲು ಕಾಂಗ್ರೆಸ್ ಜತೆ ಮೈತ್ರಿ: ನಗರಸಭೆಯಲ್ಲಿ ಸದ್ಯ ಆಡಳಿತರೂಢ ಪಕ್ಷವಾಗಿರುವ ಬಿಜೆಪಿಯಿಂದ ನಗರದ ಅಭಿವೃದ್ಧಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಮುಂದಿನ ನಗರಸಭ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಲಿದೆ.
- ಎಚ್.ಎಚ್.ದೇವರಾಜ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News