ದಿ.ಅಜ್ಜಮಾಡ ದೇವಯ್ಯ ಪುಣ್ಯ ಸ್ಮರಣೆ: ಪ್ರತಿಮೆ ಸ್ಥಾಪನೆಯ ಭರವಸೆ ನೀಡಿದ ಎಂಎಲ್‍ಸಿ ವೀಣಾಅಚ್ಚಯ್ಯ

Update: 2018-09-07 12:08 GMT

ಮಡಿಕೇರಿ, ಸೆ.7: ಭಾರತ-ಪಾಕ್ ನಡುವಿನ 1965ರ ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸುವ ಮೂಲಕ ಸಾಹಸ ಮೆರೆದು ಬಲಿದಾನ ಗೈದ ಕೊಡಗಿನ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ 53ನೇ  ಪುಣ್ಯಸ್ಮರಣಾ ಕಾರ್ಯಕ್ರಮ ನಗರದ ಖಾಸಗಿ ಬಸ್ ನಿಲ್ದಾಣದ ಅಜ್ಜಮಾಡ ದೇವಯ್ಯವೃತ್ತದಲ್ಲಿ ನಡೆಯಿತು. 

ಕೊಡವ ಮಕ್ಕಡ ಕೂಟದ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀರ ಯೋಧನ ಭಾವ ಚಿತ್ರಕ್ಕೆ ಅಜ್ಜಮಾಡ ಕುಟುಂಬಸ್ಥರು ಸೇರಿದಂತೆ ಹಲವು ಗಣ್ಯರು ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆ ಸ್ಥಾಪಿಸುವ ಕುರಿತು ಭರವಸೆ ನೀಡಿದರು. ನಗರಸಭೆಯ ಸಹಕಾರದೊಂದಿಗೆ ಅಜ್ಜಮಾಡ ದೇವಯ್ಯ ವೃತ್ತದಲ್ಲೇ ಪ್ರತಿಮೆ ಅನಾವರಣಗೊಳ್ಳಲಿದ್ದು, ಹೈಮಾಸ್ಕ್ ದೀಪವನ್ನು ಸ್ಥಳಾಂತರಗೊಳಿವುದಾಗಿ ತಿಳಿಸಿದರು.

ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಮಾತನಾಡಿ, ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪಾಕ್ ವಿರುದ್ಧದ ಯುದ್ಧದ ಸಂದರ್ಭ ಸ್ಕ್ವಾ.ಲೀ.ದೇವಯ್ಯ ಅವರು, ಶತ್ರು ರಾಷ್ಟ್ರದ ವಿಮಾನವನ್ನು ತಮ್ಮ ಜೀವಕ್ಕೆ ಅಪಾಯವಿದ್ದರು ಹೊಡೆದುರುಳಿಸುವ ಮೂಲಕ ಪ್ರಾಣಾರ್ಪಣೆಗೈದಿದ್ದರು. ಇಂತಹ ಧೀಮಂತ ವ್ಯಕ್ತಿತ್ವದ ಆದರ್ಶ ಇತರರಿಗೆ ಮಾದರಿಯಾಗಿದೆ ಎಂದರು.

ಮಾಜಿ ಸಚಿವ ಎಂ.ಸಿ.ನಾಣಯ್ಯ ಮಾತನಾಡಿ, ಸ್ಕ್ವಾ.ಲೀ.ದೇವಯ್ಯ ಅವರ ಸ್ಮರಣೆ ಕಾರ್ಯಕ್ರಮ ಯುವ ಸಮೂಹಕ್ಕೆ ಸ್ಫೂರ್ತಿದಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ಕೊಡಗಿನ ಹಲವೆಡೆಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಗ್ರಾಮೀಣರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಿನ ದುಸ್ಥಿತಿಯಿಂದ ಹೊರ ಬಂದು ಮತ್ತೆ ಕೊಡಗನ್ನು ಕಟ್ಟಿ ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದು ತಿಳಿಸಿದರು.

ಸ್ಮರಣೆ ಕಾರ್ಯಕ್ರಮದಲ್ಲಿ ಫೀ.ಮಾ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜೀರ ಅಯ್ಯಪ್ಪ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News