1,44,000 ಕೋಟಿ ರೂ. ಗಣಿ ಲೀಸ್ ಹಗರಣ: ಪಾರಿಕ್ಕರ್ ರತ್ತ ಬೆರಳು ತೋರಿಸಿದ ಗೋವಾ ಮಾಜಿ ಸಿಎಂ ಪಾರ್ಸೇಕರ್

Update: 2018-09-07 12:24 GMT

ಪಣಜಿ, ಸೆ.7: ಗೋವಾದಲ್ಲಿ 88 ಗಣಿಗಾರಿಕೆ ಲೀಸ್ ಗಳನ್ನು ಎರಡನೇ ಬಾರಿ ನವೀಕರಿಸಿದ 1,44,000 ಕೋಟಿ ರೂ. ಹಗರಣಕ್ಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿರುವ ಗೋವಾದ ಮಾಜಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಸೇಕರ್ ಅವರು ರಾಜ್ಯದ ಈಗಿನ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರತ್ತ ಬೊಟ್ಟು ಮಾಡಿ ಈ ನೀತಿಯನ್ನು ಪಾರಿಕ್ಕರ್ ಅವರ ಈ ಹಿಂದಿನ ಸಿಎಂ ಅವಧಿ ವೇಳೆ ರಚಿಸಲಾಗಿತ್ತು ಎಂದಿದ್ದಾರೆ.

ಸುಪ್ರೀಂ ಕೋರ್ಟ್ ಈ ವರ್ಷದ ಫೆಬ್ರವರಿ ತಿಂಗಳಲ್ಲಿ  ರದ್ದುಗೊಳಿಸಿದ 2014-15ರಲ್ಲಿ ನವೀಕರಿಸಲ್ಪಟ್ಟ 88 ಗಣಿ ಲೀಸ್ ಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಲೋಕಾಯುಕ್ತ ಗುರುವಾರ ಪಾರ್ಸೇಕರ್ ಹಾಗೂ ಇಬ್ಬರು ಹಿರಿಯ ಸರಕಾರಿ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು.

ಲೋಕಾಯುಕ್ತ ಈ ಪ್ರಕರಣವನ್ನು ಆದಷ್ಟು ಬೇಗ ವಿಚಾರಣೆ ನಡೆಸಿದಲ್ಲಿ ಸತ್ಯ ಹೊರಬೀಳುವುದು ಎಂದು ಪಾರ್ಸೇಕರ್ ಹೇಳಿದ್ದಾರೆ. ಗೋವಾ ಫೌಂಡೇಶನ್ ಎಂಬ ಎನ್‍ಜಿಒ ಈ ಗಣಿ ಲೀಸ್ ನವೀಕರಣ ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ  ಮೊರೆ ಹೋಗಿತ್ತಲ್ಲದೆ ರಾಜ್ಯ ಲೋಕಾಯುಕ್ತಕ್ಕೂ ದೂರು ನೀಡಿ ಪಾರ್ಸೇಕರ್ ಹಾಗೂ ಮಾಜಿ ಗಣಿ ಕಾರ್ಯದರ್ಶಿ ಪವನ್ ಕುಮಾರ್ ಸೈನ್ ಹಾಗೂ ಈಗಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ ಪ್ರಸನ್ನ ಆಚಾರ್ಯ ಅವರ  ಹೆಸರುಗಳನ್ನು ಆರೋಪಿಗಳೆಂದು ಉಲ್ಲೇಖಿಸಿತ್ತು.

``ಪಾರಿಕ್ಕರ್ ಅವರ ಹಿಂದಿನ ಸಿಎಂ ಅವಧಿಯಲ್ಲಿಯೇ ಗಣಿ ಲೀಸ್ ನಿಯಮ ಜಾರಿಯಾಗಿ ಎಂಟು ಅಥವಾ ಒಂಬತ್ತು ಲೀಸ್ ನವೀಕರಿಸಲಾಗಿತ್ತು. ನಾನು  ಸಿಎಂ ಆದಾಗ ಅದೇ ಹಾದಿಯನ್ನು ಅನುಸರಿಸಿದ್ದೆ,'' ಎಂದು ನವೆಂಬರ್ 2014ರಿಂದ ಕಳೆದ ವರ್ಷದ ಮಾರ್ಚ್  ತನಕ ಸಿಎಂ ಆಗಿದ್ದ ಪಾರ್ಸೇಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News