ನವಜಾತ ಶಿಶುಗಳ ಶ್ರವಣ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ: ಕ್ರಿಕೆಟಿಗ ಬ್ರೆಟ್ ಲೀ

Update: 2018-09-07 14:55 GMT

ಮೈಸೂರು,ಸೆ.7: ವಿಶ್ವ ಆರೋಗ್ಯ ಸಂಘಟನೆ ಅನ್ವಯ ವಿಶ್ವದಾದ್ಯಂತ 34 ಮಿಲಿಯನ್ ಮಕ್ಕಳು ಶ್ರವಣದೋಷದಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ನವಜಾತ ಶಿಶುಗಳ ಪೈಕಿ ಸಾವಿರದಲ್ಲಿ ನಾಲ್ಕು ಮಕ್ಕಳು ಗಂಭೀರ ಸ್ವರೂಪದ ಶ್ರವಣದೋಷದಿಂದ ಬಳಲುತ್ತಿದ್ದಾರೆ. ಹೀಗಾಗಿ ನವಜಾತ ಶಿಶುವಿನ ಶ್ರವಣ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಕಾಕ್ಲಿಯರ್ ಗ್ಲೋಬಲ್ ಹಿಯರಿಂಗ್ ರಾಯಭಾರಿ ಬ್ರೆಟ್ ಲೀ ಹೇಳಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಬ್ಲ್ಯೂಎಚ್‍ಒ ಪ್ರಕಾರ ವಿಶ್ವದ ಜನಸಂಖ್ಯೆಯ ಶೇ.5 ರಷ್ಟು ಮಂದಿ ಶ್ರವಣದೋಷದಿಂದ ಬಳಲುತ್ತಿದ್ದು, ಇವರಲ್ಲಿ 34 ಮಿಲಿಯನ್ ಮಕ್ಕಳು ಇದ್ದಾರೆ. ಇದೇ ಸ್ಥಿತಿ ಮುಂದುವರೆದಲ್ಲಿ 2050ರ ವೇಳೆಗೆ 900 ಮಿಲಿಯನ್ ಜನರು ಶ್ರವಣದೋಷದ ತೊಂದರೆಗೆ ಒಳಗಾಗಬಹುದು. ಕರ್ನಾಟಕದಲ್ಲಿ 2011 ಗಣತಿಯನುಸಾರ 2.35 ಲಕ್ಷ ಜನರು ಗಂಭೀರ ಸ್ವರೂಪದ ಶ್ರವಣದೋಷ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದರು.

ಕಿವುಡುತನ ನಿವಾರಣೆಗೆ ಈಗ ತಂತ್ರಜ್ಞಾನ ನೆರವಾಗುತ್ತಿದೆ. ಕಾಕ್ಲಿಯರ್ ನ ಒಟ್ಟು ಗುರಿ ಜನರಿಗೆ ಅವರ ಬದುಕನ್ನು ಮರಳಿಸುವುದಾಗಿದೆ. ಶ್ರವಣದೋಷದಿಂದ ಆಗುವ ನಷ್ಟದ ಅಂದಾಜು ಊಹೆಗೂ ನಿಲುಕದ್ದು. ಒಂದು ಅಂದಾಜಿನ ಪ್ರಕಾರ ಪ್ರಪಂಚದಲ್ಲಿ 466 ಮಿಲಿಯನ್ ಜನರು ಶ್ರವಣದೋಷ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರತಿಯೊಬ್ಬರು ಶಬ್ಧವನ್ನು ಆಲಿಸಬೇಕು ಹಾಗೂ ಜೀವನವನ್ನು ಅನುಭವಿಸಬೇಕು. ಜಗತ್ತಿನಲ್ಲಿ ಯಾರೊಬ್ಬರೂ ಕಿವುಡುತನದಿಂದ ಬಳಲಬಾರದು ಎಂದು ಹೇಳಿದರು.

ಪೋಷಕರು ಮತ್ತು ಕುಟುಂಬ ಸದಸ್ಯರು ಕಿವುಡುತನದ ಯಾವುದೇ ಸಣ್ಣ ಚಿಹ್ನೆಗಳನ್ನು ನಿರ್ಲಕ್ಷಿಸಬಾರದು. ಒಂದು ಇಂಪ್ಲಾಂಟ್ ಹೇಗೆ ಒಬ್ಬ ವ್ಯಕ್ತಿಯನ್ನು ಮೌನದಿಂದ ಶಬ್ದದೆಡೆಗೆ ಕೊಂಡೊಯ್ಯುತ್ತದೆ ಎಂಬುದನ್ನು ನಾನು ನೋಡಿದ್ದೇನೆ. ಇದೊಂದು ಜೀವನ ಬದಲಾಗುವ ಕ್ಷಣ ಎಂದರು.

ದೇಶದಲ್ಲೇ ಇದೇ ಮೊದಲ ಬಾರಿಗೆ ಕೇರಳದಲ್ಲಿ 66 ಸರ್ಕಾರಿ ಹೆರಿಗೆ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ ಶ್ರವಣದೋಷ ಪರೀಕ್ಷೆ ಮಾಡಲಾಗುತ್ತಿದೆ. ಕೇರಳ ಸಾಮಾಜಿಕ ಭದ್ರತಾ ಮಿಷನ್ ಇದಕ್ಕಾಗಿ ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದ್ದು, ನವಜಾತ ಶಿಶುಗಳ ಶ್ರವಣದೋಷ ಪರೀಕ್ಷೆ ಕುರಿತು ಅಂಕಿಅಂಶಗಳನ್ನು ಕ್ರೋಢೀಕರಿಸಲಿದೆ. ಈ ಮಾಹಿತಿಯನ್ನು ಜಿಲ್ಲಾ ಮಟ್ಟದ ಸಮಿತಿಗಳು ಸೇರಿ ಇತರೆ ಸಂಸ್ಥೆಗಳ ಜತೆಗೆ ಹಂಚಿಕೆ ಮಾಡಿಕೊಳ್ಳಲು ಮುಂದುವರಿದ ಚಿಕಿತ್ಸೆಯನ್ನು ನೀಡಲು ಸಹಕಾರಿಯಾಗಲಿದೆ ಎಂದರು.

ಕೊಲಂಬಿಯಾ ಏಷಿಯಾ ಆಸ್ಪತ್ರೆಯ ನೆಕ್ ಸರ್ಜರಿ ಮತ್ತು ಕನ್ಸಲ್ಟಂಟ್ ಇಎನ್ ಟಿ ಮುಖ್ಯಸ್ಥ ಡಾ.ಎಚ್.ಎ.ದತ್ತಾತ್ರಿ ಮಾತನಾಡಿ, ನಮ್ಮ ದೇಶದಲ್ಲಿ ಶ್ರವಣದೋಷ ಸಮಸ್ಯೆ ಕುರಿತಂತೆ ಅದಕ್ಕೆ ಕಾರಣ, ಇದರ ಪರಿಣಾಮ, ಸೂಚನೆಗಳು, ಹೇಗೆ ಮತ್ತು ಯಾವಾಗ ಇದಕ್ಕೆ ಅಗತ್ಯ ಚಿಕಿತ್ಸೆ ಪಡೆಯಬೇಕು ಎಂಬುದರ ಬಗ್ಗೆ ಸಾರ್ವಜನಿಕ ಅರಿವು ಕಡಿಮೆ. ತಾಂತ್ರಿಕ ಪ್ರಗತಿಯಿಂದಾಗಿ ಈಗ ಜನನ ಹಂತದಲ್ಲಿಯೇ ಶ್ರವಣ ಸಮಸ್ಯೆ ಗುರುತಿಸುವುದು ಸಾಧ್ಯವಾಗಿದೆ. ಈ ಹಿಂದೆ ಮಕ್ಕಳಲ್ಲಿ ಈ ದೋಷ ಕಂಡುಬಂದಾಗ ಅವರು ಮೂಕಭಾಷೆ ಕಲಿತು ಅವರಲ್ಲಿ ಪರಿಣಿತಿ ಹೊಂದಿ ಧ್ವನಿಯಿಲ್ಲದ ಬದುಕಿಗೆ ಹೊಂದಿಕೊಳ್ಳಬೇಕಾಗಿತ್ತು. ಆದರೆ ಈಗ ನವಜಾತ ಶಿಶುಗಳ ತಪಾಸಣೆ ತುಂಬಾ ಸಹಕಾರಿಯಾಗಿದ್ದು, ಶ್ರವಣದೋಷವುಳ್ಳ ಮಕ್ಕಳಿಗೆ ತುಂಬ ಸಹಾಯಕವಾಗಿದೆ. ಶಿಶುವಿನ ಮೊದಲ ಪರೀಕ್ಷೆಯನ್ನು ಜನನವಾದ ಮೊದಲ ತಿಂಗಳಿನಲ್ಲಿಯೇ ಅಥವಾ 12 ತಿಂಗಳ ಒಳಗೆ ಮಾಡಿಸುವುದು ಉತ್ತಮ. ಈ ಹಂತದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಮಾಡುವುದು ಕೂಡ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News