ಕರ್ಕಶ ಶಬ್ದದ ಬುಲೆಟ್ ಬೈಕ್‍ಗಳ ಸದ್ದಡಗಿಸುತ್ತಿರುವ ಶಿವಮೊಗ್ಗ ಆರ್‍ಟಿಓ ಇಲಾಖೆ: 140 ಕೇಸ್ ದಾಖಲು

Update: 2018-09-07 15:31 GMT

ಶಿವಮೊಗ್ಗ, ಸೆ. 9: ಶಿವಮೊಗ್ಗ ಆರ್‍ಟಿಓ ಇಲಾಖೆಯು ಕರ್ಕಶ ಶಬ್ದ ಹೊರಹೊಮ್ಮಿಸುವ ಬುಲೆಟ್ ಬೈಕ್‍ಗಳ ವಿರುದ್ದ ಸಮರ ಸಾರಿದ್ದು, ಇಂತಹ ಬೈಕ್‍ಗಳನ್ನು ಪತ್ತೆ ಹಚ್ಚಿ ಕೇಸ್ ದಾಖಲಿಸಿ ವಶಕ್ಕೆ ಪಡೆಯುವುದರ ಜೊತೆಗೆ, ಚಾಲಕರಿಗೆ ದುಬಾರಿ ದಂಡ ವಿಧಿಸುತ್ತಿದೆ. 

ಇದರ ಜೊತೆಗೆ ಕರ್ಕಶ ಶಬ್ದ ಹೊರಹೊಮ್ಮುವ ಸೈಲೈನ್ಸರ್ ಪೈಪ್ - ಹಾರ್ನ್‍ಗಳನ್ನು ಮಾರಾಟ ಮಾಡುವ ಆಟೋಮೊಬೈಲ್ಸ್ ಅಂಗಡಿ ಮಾಲಕರು ಹಾಗೂ ಇವುಗಳನ್ನು ಬೈಕ್‍ಗಳಿಗೆ ಅಳವಡಿಸಿ ಕೊಡುವ ಗ್ಯಾರೇಜ್ ಮೆಕ್ಯಾನಿಕ್‍ಗಳಿಗೆ ನೋಟೀಸ್ ಜಾರಿಗೊಳಿಸಿದೆ. ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆಯ ಸಂದೇಶ ಕೂಡ ರವಾನಿಸಿದೆ.

ಆರ್‍ಟಿಓ ಇಲಾಖೆಯ ಈ ಖಡಕ್ ನಿರ್ಧಾರ, ಇಷ್ಟು ದಿನ ಕರ್ಕಶ ಶಬ್ದ ಹೊರಹೊಮ್ಮಿಸುತ್ತ ನಾಗರಿಕರ ಎದೆ ನಡುಗಿಸುತ್ತಿದ್ದ ಬುಲೆಟ್ ಬೈಕ್ ಚಾಲಕರ ಮತ್ತು ಕೆಲ ಆಟೋಮೊಬೈಲ್ ಶಾಪ್ ಹಾಗೂ ಗ್ಯಾರೇಜ್ ಮೆಕ್ಯಾನಿಕ್‍ಗಳ ನಿದ್ದೆಗೆಡಿಸಿದೆ. ಮತ್ತೊಂದೆಡೆ ಕರ್ಕಶ ಶಬ್ದದಿಂದ ಅಕ್ಷರಶಃ ರೋಸಿ ಹೋಗಿದ್ದ ನಾಗರಿಕರೀಗ, ಪ್ರಸ್ತುತ ಆರ್‍ಟಿಓ ಇಲಾಖೆ ಕೈಗೊಂಡಿರುವ ದಿಟ್ಟ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿಯ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಬೇಕು. ಇತರೆ ವಾಹನಗಳಿಂದಾಗುತ್ತಿರುವ ಶಬ್ದ ಮಾಲಿನ್ಯಕ್ಕೂ ಕಡಿವಾಣ ಹಾಕಬೇಕು ಎಂದು ಸಲಹೆ ನೀಡುತ್ತಾರೆ. 

ತಂಡ ರಚನೆ: ಕರ್ಕಶ ಶಬ್ದ ಉಂಟು ಮಾಡುವ ಬುಲೆಟ್ ಬೈಕ್‍ಗಳ ಪತ್ತೆಗೆ ಪ್ರಾದೇಶಿಕ ಸಾರಿಗೆ ಇಲಾಖೆಯ ಉಪ ಆಯುಕ್ತ ಶಿವರಾಜ್ ಬಿ. ಪಾಟೀಲ್‍ರವರು ವಿಶೇಷ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ. ಎರಡು ವಿಶೇಷ ತಂಡ ರಚಿಸಿದ್ದಾರೆ. ಈ ತಂಡಗಳು ವಿವಿಧೆಡೆ ಕಾರ್ಯಾಚರಿಸಿ, ನೂರಾರು ಬುಲೆಟ್‍ಗಳನ್ನು ವಶಕ್ಕೆ ಪಡೆದಿದೆ. ಸರಿಸುಮಾರು 140 ಕೇಸ್ ದಾಖಲಿಸಿದೆ. ಹಾಗೆಯೇ ಸವಾರರಿಗೆ 3000 ರೂ. ದಂಡ ಕೂಡ ವಿಧಿಸಿದೆ. 

ಜೊತೆಗೆ ಕರ್ಕಶ ಶಬ್ದ ಉಂಟು ಮಾಡುವ ಸೈಲೈನ್ಸರ್ ಪೈಪ್, ಹಾರ್ನ್‍ಗಳನ್ನು ಕಿತ್ತು ಹಾಕುತ್ತಿದ್ದಾರೆ. ಸಂಬಂಧಿಸಿದ ಬೈಕ್ ಮಾಲಕರಿಂದ ಕಾನೂನುಬದ್ದ ಸೈಲೈನ್ಸರ್ ಹಾಗೂ ಹಾರ್ನ್‍ಗಳನ್ನು ಅಳವಡಿಸಿ, ಅದರ ಶಬ್ದ ಪರಿಶೀಲಿಸಿ ಬೈಕ್‍ಗಳನ್ನು ಬಿಟ್ಟು ಕಳುಹಿಸುತ್ತಿದ್ದಾರೆ. 

ಆರ್‍ಟಿಓ ಇಲಾಖೆಯ ನಿರ್ಧಾಕ್ಷಿಣ್ಯ, ಕಠಿಣ ಕ್ರಮದಿಂದ ಬೆಚ್ಚಿ ಬಿದ್ದಿರುವ ಹಲವು ಬೈಕ್ ಮಾಲಕರು, ಇದೀಗ ತಮ್ಮ ಬುಲೆಟ್‍ಗಳಿಗೆ ಅಳವಡಿಸಿದ್ದ ಶಬ್ದ ಮಾಲಿನ್ಯ ಉಂಟು ಮಾಡುವ ಸೈಲೈನ್ಸರ್-ಹಾರ್ನ್‍ಗಳನ್ನು ತೆಗೆದು ಹಾಕಲು ಗ್ಯಾರೇಜ್ ಶಾಪ್‍ಗಳಿಗೆ ದೌಡಾಯಿಸುತ್ತಿದ್ದಾರೆ. ನಿಗದಿತ ಮಾನದಂಡದ ಸೈಲೈನ್ಸರ್-ಹಾರ್ನ್ ಅಳವಡಿಸುತ್ತಿದ್ದಾರೆ. 

ಸ್ಥಗಿತ: ಇಷ್ಟು ದಿನ ನಿಯಮಕ್ಕೆ ವಿರುದ್ದವಾಗಿ, ಬೇಕಾಬಿಟ್ಟಿಯಾಗಿ ಕರ್ಕಶ ಶಬ್ದ ಹೊರಹೊಮ್ಮುವ ಸೈಲೈನ್ಸರ್ - ಹಾರ್ನ್‍ಗಳನ್ನು ಮಾರಾಟ ಮಾಡುತ್ತಿದ್ದ ಕೆಲ ಆಟೋಮೊಬೈಲ್ ಅಂಗಡಿಯವರು ಹಾಗೂ ಇವುಗಳನ್ನು ಬೈಕ್‍ಗಳಿಗೆ ಅಳವಡಿಕೆ ಮಾಡಿಕೊಡುತ್ತಿದ್ದ ಗ್ಯಾರೇಜ್ ಮೆಕಾನಿಕ್‍ಗಳು ಆರ್‍ಟಿಓ ನೀಡಿರುವ ನೋಟೀಸ್‍ಗೆ ಬೆಚ್ಚಿಬಿದ್ದಿದ್ದಾರೆ.

ಅಂಗಡಿಯವರು ಅನಧಿಕೃತ ಸೈಲೈನ್ಸರ್-ಹಾರ್ನ್‍ಗಳ ಮಾರಾಟ ಸ್ಥಗಿತಗೊಳಿಸಿದ್ದರೆ, ಮೆಕ್ಯಾನಿಕ್‍ಗಳು ಅಳವಡಿಕೆ ಮಾಡಿಕೊಡುವುದನ್ನು ನಿಲ್ಲಿಸಿದ್ದಾರೆ. ಮತ್ತೊಂದೆಡೆ ಬೈಕ್ ಮಾಲೀಕರು ಕೂಡ ಅನದಿಕೃತ ಸೈಲೈನ್ಸರ್-ಹಾರ್ನ್‍ಗಳ ಖರೀದಿ ನಿಲ್ಲಿಸಿದ್ದಾರೆ.

ಸಾರ್ವಜನಿಕರಿಂದ ಸಾಲುಸಾಲು ದೂರು!
ಕೆಲ ಬುಲೆಟ್ ಬೈಕ್‍ಗಳಿಂದ ಉಂಟಾಗುತ್ತಿದ್ದ ಭಾರೀ ಪ್ರಮಾಣದ ಶಬ್ದದಿಂದ ನಾಗರಿಕರು ಅಕ್ಷರಶಃ ರೋಸಿ ಹೋಗಿದ್ದರು. ಶಬ್ದ ಹಾಗೂ ವಾಯು ಮಾಲಿನ್ಯದಿಂದ ನಾಗರೀಕರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತ್ತು. ಈ ಕುರಿತಂತೆ ಆರ್.ಟಿ.ಓ. ಹಾಗೂ ಪೊಲೀಸ್ ಇಲಾಖೆಗೆ ನಾಗರೀಕರಿಂದ ಸಾಲುಸಾಲು ದೂರುಗಳು ಬಂದಿದ್ದವು. ನಾಗರಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಆರ್‍ಟಿಓ ಇಲಾಖೆಯು, ಶತಾಯಗತಾಯ ಬುಲೆಟ್‍ಗಳ ಸದ್ದಡಗಿಸಲು ನಿರ್ಧರಿಸಿತ್ತು. ಅದರಂತೆ ಇದೀಗ ಭಾರೀ ದೊಡ್ಡ ಪ್ರಮಾಣದ ಕಾರ್ಯಾಚರಣೆ ನಡೆಸಲಾರಂಭಿಸಿದೆ. 

ನಿರ್ಧಾಕ್ಷಿಣ್ಯ ಕ್ರಮ: ಉಪ ಸಾರಿಗೆ ಆಯುಕ್ತ ಶಿವರಾಜ್ ಬಿ. ಪಾಟೀಲ್
ಯಾವುದೇ ಮೋಟಾರು ವಾಹನ ಜನನಿಬಿಡ ಸ್ಥಳಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಮೋಟಾರು ವಾಹನ ಕಾಯ್ದೆ ನಿಯಮಕ್ಕೆ ಒಳಪಟ್ಟು ಸಂಚರಿಸಬೇಕಾಗುತ್ತದೆ. ಆದರೆ ಜಿಲ್ಲೆಯ ಕೆಲವು ಮೋಟಾರು ವಾಹನ ಮಾಲೀಕರು, ಚಾಲಕರು, ವಾಹನ ಗ್ಯಾರೇಜ್ ಮಾಲೀಕರು, ವಾಹನಗಳ ವಿತರಕರು ಒಟ್ಟುಗೂಡಿ ಸೈಲೈನ್ಸರ್‍ಗಳನ್ನು ಟ್ಯಾಂಪರ್ ಮಾಡುವುದು, ವಿದ್ಯುತ್‍ಚಾಲಿತ ಹಾರ್ನ್‍ಗಳ ಬದಲಿಗೆ ಮಲ್ಟಿ ಟೋನ್ ಹಾರ್ನ್‍ಗಳನ್ನು ಅಳವಡಿಕೆ ಮಾಡುತ್ತಿದ್ದರು. ಇದರಿಂದ ನಾಗರಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿತ್ತು' ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಉಪ ಸಾರಿಗೆ ಆಯುಕ್ತ ಶಿವರಾಜ್ ಬಿ. ಪಾಟೀಲ್‍ರವರು ತಿಳಿಸಿದ್ದಾರೆ. 

ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಈ ಕಾರಣದಿಂದ ಕರ್ಕಶ ಸೈಲೈನ್ಸರ್ - ಹಾರ್ನ್ ಅಳವಡಿಕೆ ಮಾಡಿದ ವಾಹನಗಳ ವಿರುದ್ದ ಕೇಸ್ ದಾಖಲಿಸಲಾಗುತ್ತಿದೆ. ಹಾಗೆಯೇ ಇಂತಹ ವಸ್ತುಗಳನ್ನು ಮಾರಾಟ ಮಾಡುವ ವಾಹನ ಬಿಡಿಭಾಗ ಮಾರಾಟಗಾರರು ಹಾಗೂ ಅಳವಡಿಸುವ ಗ್ಯಾರೇಜ್ ಮಾಲಿಕರಿಗೆ ಮೋಟಾರು ವಾಹನ ಕಾಯ್ದೆ ಕಲಂ 190 ಹಾಗೂ 191 ರ ಅನ್ವಯ ನೋಟೀಸ್ ನೀಡಲಾಗಿದೆ. 7 ದಿವಸದೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ' ಎಂದು ಉಪ ಸಾರಿಗೆ ಆಯುಕ್ತ ಶಿವರಾಜ್ ಬಿ. ಪಾಟೀಲ್‍ರವರು ಸ್ಪಷ್ಟಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News