ಬೆಂಗಳೂರಿನಲ್ಲೇ ನಡೆಯಲಿದೆ ಏರೋ ಇಂಡಿಯಾ ಶೋ: ಕೇಂದ್ರ ಸರಕಾರದ ಸ್ಪಷ್ಟನೆ

Update: 2018-09-08 06:55 GMT

ಬೆಂಗಳೂರು, ಸೆ.8: ಏಷ್ಯಾದ ಅತ್ಯಂತ ದೊಡ್ಡ ಮಿಲಿಟರಿ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಬೆಂಗಳೂರಿನಲ್ಲಿ ಮುಂದಿನ  ವರ್ಷದ ಫೆಬ್ರವರಿಯಲ್ಲಿ ನಡೆಯಲಿದೆ ಎಂದು ಸರಕಾರ ಹೇಳಿದೆ.

ಬೆಂಗಳೂರು ನಗರ ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಆಯೋಜಿಸುತ್ತಿದ್ದ ಈ ಪ್ರತಿಷ್ಠಿತ ವೈಮಾನಿಕ ಪ್ರದರ್ಶನವನ್ನು ಈ ಬಾರಿ ಬೇರೆ ನಗರದಲ್ಲಿ ಆಯೋಜಿಸುವ ಸಾಧ್ಯತೆಯಿದೆಯೆಂಬ ವರದಿಗಳ ಹಿನ್ನೆಲೆಯಲ್ಲಿ  ಇತ್ತೀಚೆಗೆ ವಿವಾದ ಸೃಷ್ಟಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಏರೋ ಇಂಡಿಯಾ 2019 ಬೆಂಗಳೂರಿನಲ್ಲಿ ಫೆಬ್ರವರಿ 20ರಿಂದ 24ರ ತನಕ ನಡೆಯುವುದೆಂದು ಸರಕಾರ ನಿರ್ಧರಿಸಿದೆ. ಈ ಐದು ದಿನದ ಕಾರ್ಯಕ್ರಮವು  ವೈಮಾನಿಕ ಮತ್ತು ರಕ್ಷಣಾ ಸಂಬಂಧಿತ ಕೈಗಾರಿಕೆಗಳಿಗೆ ಪ್ರಮುಖ ವ್ಯಾಪಾರ  ಮೇಳವೂ ಆಗಲಿದೆ ಎಂದು ಸರಕಾರ ಬಿಡುಗಡೆಗೊಳಿಸಿದೆ ಹೇಳಿಕೆ ತಿಳಿಸಿದೆ.

“ವೈಮಾನಿಕ ಕ್ಷೇತ್ರದ ಜಾಗತಿಕ ನಾಯಕರು ಹಾಗೂ ದೊಡ್ಡ ಹೂಡಿಕೆದಾರರ ಹೊರತಾಗಿ ಜಗತ್ತಿನಾದ್ಯಂತದಿಂದ ಹಲವು ಮಂದಿ  ಇದರಲ್ಲಿ ಭಾಗವಹಿಸಲಿದ್ದಾರೆ'' ಎಂದೂ ಹೇಳಿಕೆ ತಿಳಿಸಿದೆ.

ಈ ಬಾರಿ ಈ ವೈಮಾನಿಕ ಪ್ರದರ್ಶನ ಲಕ್ನೋದಲ್ಲಿ ನಡೆಯಬಹುದೆಂಬ ಊಹಾಪೋಹದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಮಧ್ಯ ಪ್ರವೇಶಿಸಿತ್ತಲ್ಲದೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಧಾನಿಗೆ ಪತ್ರ ಬರೆದು ಈ ಕಾರ್ಯಕ್ರಮಕ್ಕೆ ಬೆಂಗಳೂರು ನಗರವೇ ಪ್ರಶಸ್ತವಾದ ಸ್ಥಳ ಎಂದಿದ್ದರು.

ಈ ವೈಮಾನಿಕ ಪ್ರದರ್ಶನವನ್ನು ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಸಬೇಕೆಂದು ಆ ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್ ಇತ್ತೀಚೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಅವರನ್ನು ಆಗ್ರಹಿಸಿದ್ದರು. ಒಡಿಶಾ. ಗುಜರಾತ್, ರಾಜಸ್ಥಾನ ಮತ್ತು ತಮಿಳುನಾಡು ಕೂಡ ಈ ಪ್ರದರ್ಶನ ಆಯೋಜಿಸುವ ಇಂಗಿತ ವ್ಯಕ್ತಪಡಿಸಿದ್ದವು.

ರಕ್ಷಣಾ ಸಚಿವೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದವರಾಗಿರುವುದರಿಂದ ಅವರು ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸಬೇಕೆಂದು ಕರ್ನಾಟಕ ಕಾಂಗ್ರೆಸ್ ಸಚಿವೆಯನ್ನು ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News