ಸ್ವರಾಜ್ ಅಭಿಯಾನ್ ನಾಯಕ ಯೋಗೇಂದ್ರ ಯಾದವ್ ತಮಿಳುನಾಡಿನಲ್ಲಿ ಪೊಲೀಸ್ ವಶಕ್ಕೆ

Update: 2018-09-08 09:26 GMT

ಚೆನ್ನೈ, ಸೆ.8: ಸ್ವರಾಜ್ ಅಭಿಯಾನ್ ಮುಖ್ಯಸ್ಥ ಹಾಗೂ ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಯೋಗೇಂದ್ರ ಯಾದವ್ ಅವರನ್ನು  ತಮಿಳುನಾಡಿನ ತಿರುವನ್ನಮಲೈ ಜಿಲ್ಲೆಯಲ್ಲಿ ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ. 10,000 ಕೋಟಿ ರೂ. ವೆಚ್ಚದ ಸೇಲಂ-ಚೆನ್ನೈ ಷಟ್ಪಥ ಹೆದ್ದಾರಿಯ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಭೇಟಿಯಾಗಲು ಅವರು ಹೊರಟಿದ್ದಾಗ ವಶಕ್ಕೆ ಪಡೆದುಕೊಳ್ಳಲಾಗಿದೆ.

ರೈತರನ್ನು ತಾನು ಭೇಟಿಯಾಗದಂತೆ ಪೊಲೀಸರು ತಡೆದಿದ್ದಾರೆ, ತಮ್ಮನ್ನು ಬಲವಂತದಿಂದ ಪೊಲೀಸ್ ವ್ಯಾನಿಗೆ ದೂಡಲಾಗಿದೆ ಹಾಗೂ ತನ್ನ ಮೊಬೈಲ್ ಫೋನನ್ನು ಪೊಲೀಸರು ಸೆಳೆದುಕೊಂಡಿದ್ದಾರೆ ಎಂದು ಯಾದವ್ ಟ್ವೀಟ್ ಮಾಡಿದ್ದಾರೆ.

ಆದರೆ ಪೊಲೀಸರು ಯಾದವ್ ಅವರ ಆರೋಪ ನಿರಾಕರಿಸಿದ್ದಾರಲ್ಲದೆ ಪ್ರತಿಭಟಿಸುತ್ತಿರುವ ರೈತರನ್ನು ಭೇಟಿಯಾಗಲು ಅವರು ಅನುಮತಿ ಪಡೆದಿರಲಿಲ್ಲ ಎಂದು ಹೇಳಿದ್ದಾರೆ. ರೈತರ ಪ್ರತಿಭಟನೆಯ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಯಾದವ್ ಮತ್ತವರ ತಂಡಕ್ಕೆ ಪೊಲೀಸರ ಸುರಕ್ಷೆಯೂ ಬೇಕಾಗಿರುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ರೈತರ ಹಕ್ಕುಗಳಿಗಾಗಿ ಹೋರಾಡಲು ಕಳೆದ ವರ್ಷ ಜೈ ಕಿಸಾನ್ ಆಂದೋಲನ್ ಆರಂಭಿಸಿದ್ದ ಅವರು ಯೋಜನೆಗಾಗಿ ಬಲವಂತದ ಭೂಸ್ವಾಧೀನ ಹಾಗೂ ಪೊಲೀಸ್ ದೌರ್ಜನ್ಯದ ಕುರಿತು ತಾವು ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರಿಗೆ ದೂರಿದ ಕೆಲವೇ ನಿಮಿಷಗಳಲ್ಲಿ ತಮ್ಮನ್ನು ಬಂಧಿಸಲಾಯಿತು ಎಂದು ಯಾದವ್ ಇನ್ನೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

ಸ್ಥಳೀಯರು ಹಾಗೂ ರೈತರು ತಮ್ಮ ಭೂಮಿ ಕಳೆದುಕೊಳ್ಳುವ ಭಯದಿಂದ ಹೋರಾಡುತ್ತಿದ್ದರೆ, ಪರಿಸರವಾದಿಗಳು ಯೋಜನೆಗಾಗಿ ಮರಗಳನ್ನು ಕಡಿಯುವುದನ್ನು ವಿರೋಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News