ಕಾಂಡನಕೊಲ್ಲಿ ನಿರಾಶ್ರಿತರ ಆಹಾರ ಪದಾರ್ಥಗಳ ಹಂಚಿಕೆಯಲ್ಲಿ ದುರುಪಯೋಗವಾಗಿಲ್ಲ: ಗ್ರಾಮಸ್ಥರ ಸ್ಪಷ್ಟನೆ

Update: 2018-09-08 11:29 GMT

ಮಡಿಕೇರಿ, ಸೆ.8: ಕಾಂಡನಕೊಲ್ಲಿಯ ನಿರಾಶ್ರಿತರಿಗಾಗಿ ತರಲಾಗಿದ್ದ ಆಹಾರ ಪದಾರ್ಥಗಳ ಹಂಚಿಕೆ ಸಂದರ್ಭ ಯಾವುದೇ ರೀತಿಯಲ್ಲಿ ದುರುಪಯೋಗವಾಗಿಲ್ಲವೆಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಜಿ.ರವಿ, ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಕಾಂಡನಕೊಲ್ಲಿಯ ಸುಮಾರು 65 ಕುಟುಂಬಗಳು ಸುಂಟಿಕೊಪ್ಪದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಹೊರ ಜಿಲ್ಲೆಗಳಿಂದಲೂ ಪ್ರತಿನಿತ್ಯ ದಿನಸಿ ಸಾಮಾಗ್ರಿಗಳು ಬರುತ್ತಿದ್ದು, ಅದರಂತೆ ಆ.29 ರಂದು ಸಕಲೇಶಪುರದ ಮೊಗೇರ ಸಮಾಜ ಬಾಂಧವರು ತಮ್ಮ ಸಂಘದ ಮೂಲಕ ಪರಿಹಾರ ಕೇಂದ್ರದಲ್ಲಿದ್ದ 65 ಕುಟುಂಬಕ್ಕೂ ತಲಾ 10 ಕೆ.ಜಿ. ಅಕ್ಕಿ, 1 ಕೆ.ಜಿ. ಬೇಳೆ, 1 ಕೆ.ಜಿ. ಸಕ್ಕರೆ 2 ಕೆಜಿ ರಾಗಿ ಹಾಗೂ 100 ಗ್ರಾಂ. ಎಣ್ಣೆ ಇತ್ಯಾದಿ ಸಾಮಾಗ್ರಿಗಳನ್ನು ನೀಡಿದ್ದಾರೆ ಎಂದು ಹೇಳಿದರು. 

ಭೂಕುಸಿತದಿಂದಾಗಿ ಕಾಂಡನಕೊಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಆಹಾರ ಪದಾರ್ಥಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗದ ಪರಿಸ್ಥಿತಿ ಇದೆ. ಈ ಕಾರಣಕ್ಕೆ ಸ್ಥಳೀಯ ಹರದೂರು ಗ್ರಾ.ಪಂ ಸದಸ್ಯ ಗೌತಮ್ ಶಿವಪ್ಪ ಅವರ ಸಂಬಂಧಿಕರ ಮನೆಯಲ್ಲಿ ದಾಸ್ತಾನು ಇರಿಸಿ, ರಸ್ತೆ ದುರಸ್ತಿಯಾದ ನಂತರ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿತ್ತು. ಆದರೆ ರಾಜಕೀಯ ವಿರೋಧಿಗಳು ಇಲ್ಲಸಲ್ಲದ ಆರೋಪ ಮಾಡಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಸ್ಥಳ ಪರಿಶೀಲನೆ ನಡೆಸಿದ ಸಂದರ್ಭ ಸತ್ಯಾಂಶ ತಿಳಿದು ಬಂದಿದ್ದು, ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ರಸ್ತೆ ದುರಸ್ತಿಯಾದ ಬಳಿಕ ಸಾಮಾಗ್ರಿಗಳನ್ನು ಕೊಂಡೊಯ್ಯುವಂತೆ ಸೂಚಿಸಿದ ಹಿನ್ನೆಲೆ ಸೆ.7 ರಂದು ತಹಶೀಲ್ದಾರ್ ಸಮ್ಮುಖದಲ್ಲಿ ಸಕಲೇಶಪುರ ಮೊಗೇರ ಸಂಘದ ಪದಾಧಿಕಾರಿಗಳೊಂದಿಗೆ ಸಂತ್ರಸ್ತರ ಮನೆಮನೆಗೆ ತೆರಳಿ ಹಂಚಿಕೆ ಮಾಡಲಾಗಿದೆ ಎಂದರು. ಈ ಬಗ್ಗೆ ದೃಶ್ಯಾವಳಿಗಳು ನಮ್ಮ ಬಳಿ ಇದೆ ಎಂದು ರವಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಕೆ.ಕೆ.ಹರೀಶ್ ಹಾಗೂ ಎಸ್.ಆರ್. ಸುರೇಶ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News