ಸೆ.10ರಂದು ಭಾರತ್ ಬಂದ್ ಕರೆ: ವಿವಿಧ ಪಕ್ಷಗಳು, ಸಂಘಟನೆಗಳಿಂದ ಬೆಂಬಲ

Update: 2018-09-08 11:43 GMT

ಚಿಕ್ಕಮಗಳೂರು, ಸೆ.8: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತನ್ನ 52 ತಿಂಗಳ ಅಧಿಕಾರವಧಿಯಲ್ಲಿ 12 ಬಾರಿ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಏರಿಸುವ ಮೂಲಕ ಸುಮಾರು 11 ಲಕ್ಷ ಕೋಟಿ ರೂ. ತೆರಿಗೆಯನ್ನು ಸಂಗ್ರಹಿಸಿ ಜನಸಾಮಾನ್ಯರನ್ನು ಲೂಟಿ ಮಾಡಿದೆ. ಇದರ ಫಲವಾಗಿ ದೇಶಾದ್ಯಂತ ಸಾರ್ವಜನಿಕರ ಬದುಕು ಮೂರಾಬಟ್ಟೆಯಾಗುತ್ತಿದೆ. ಕೇಂದ್ರದ ಈ ಜನವಿರೋಧಿ ಆಡಳಿತ ವಿರೋಧಿಸಿ ಸೆ.10ರಂದು ಕರೆ ನೀಡಲಾಗಿರುವ ಭಾರತ್ ಬಂದ್ ಬೆಂಬಲಿಸಿ ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳು, ಪ್ರಗತಿಪರ, ಕನ್ನಡ ಪರ, ರೈತ ಪರ ಸಂಘಟನೆಗಳ ಮುಖಂಡರು ಸಭೆ ನಡೆಸಿ ಜಿಲ್ಲೆಯಲ್ಲಿ ಸಂಪೂರ್ಣ ಬಂದ್ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಡಿ.ಎಲ್.ವಿಜಯ್‍ಕುಮರ್ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ತೈಲ ಬೆಲೆಗಳೂ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಕಡಿತಗೊಳಿಸುವ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರಕಾರ ಪದೇ ಪದೇ ತೈಲ ಬೆಲೆಗಳನ್ನು ಏರಿಸಿದ್ದರಿಂದ ಇವುಗಳ ಬೆಲೆ ಸಾರ್ವಕಾಲಿಕೆ ದಾಖಲೆ ರೂಪದಲ್ಲಿ ಏರಿಕೆಯಾಗಿದೆ. ಇದರ ಪರಿಣಾಮವಾಗಿ ದೇಶಾದ್ಯಂತ ಅಡುಗೆ ಅನಿಲ ಸೇರಿದಂತೆ ಎಲ್ಲ ಅಗತ್ಯವಸ್ತುಗಳ ಬೆಲೆ ಗಗನಕ್ಕೇರುವಂತಾಗಿದೆ. ಇದು ಶ್ರೀಸಾಮಾನ್ಯರ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಜನರ ಬದುಕಿನ ಹಕ್ಕನ್ನೇ ಕಸಿಯುತ್ತಿದೆ ಎಂದು ಆರೋಪಿಸಿದರು.

2014ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 1 ಬ್ಯಾರಲ್‍ಗೆ 107.9 ರೂ. ಇತ್ತು. ಪ್ರಸಕ್ತ ಇದು 73 ರೂ.ಗೆ ಇಳಿಕೆ ಕಂಡಿದ್ದರೂ ಮೋದಿ ಸರಕರ ತೆರಿಗೆ ಹಣ ಲೂಟಿ ಮಾಡಲು ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಏರಿಸುತ್ತಲೇ ಇದೆ. ಇದರಿಂದಾಗಿ 2014ರಲ್ಲಿ 9.2ರಷ್ಟಿದ್ದ ಪೆಟ್ರೋಲ್ ಮೇಲಿನ ತೆರಿಗೆ ಪ್ರಸಕ್ತ 19.48 ರೂ. ಆಗಿದೆ. 3.46 ಇದ್ದ ಡೀಸೆಲ್ ಮೇಲಿನ ತೆರಿಗೆ ಪ್ರಸಕ್ತ 15.33ಕ್ಕೇರಿಸಲಾಗಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ 12 ಬಾರಿ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಏರಿಸಲಾಗಿದೆ. 2014ರಲ್ಲಿ ಅಡುಗೆ ಅನಿಲಕ್ಕೆ 414 ರೂ. ಇತ್ತು. ಪ್ರಸಕ್ತ 754 ರೂ.ಗೆ ಏರಿಕೆ ಮಾಡಲಾಗಿದೆ. ಪೆಟ್ರೋಲ್, ಡೀಸೆಲ್ ಅನ್ನೂ ಜಿಎಸ್‍ಟಿ ವಾಪ್ತಿಗೆ ತರಬೇಕೆಂದು ಕಾಂಗ್ರೆಸ್ ಪದೇಪದೇ ಒತ್ತಾಯಿಸಿದರೂ ಬಿಜೆಪಿ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಈ ಬೆಲೆ ಏರಿಕೆಯಾಗಿದೆ. ಕೇಂದ್ರ ಸಚಿವ ಅರುಣ್‍ ಜೇಟ್ಲಿ ಅವರು ಯಾವುದೇ ಕಾರಣಕ್ಕೂ ಬೆಲೆ ಇಳಿಕೆ ಸಾಧ್ಯವಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಸಾರ್ವಜನಿಕರ ಬದುಕನ್ನು ನರಕಕ್ಕೆ ತಳ್ಳಿದ್ದಾರೆ ಎಂದು ಟೀಕಿಸಿದರು.

ಕೇಂದ್ರದ ಈ ಜನವಿರೋಧಿ ನೀತಿ ಖಂಡಿಸಿ ಹಾಗೂ ಬೆಲೆ ಇಳಿಕೆಗೆ ಒತ್ತಾಯಿಸಿ ದೇಶಾದ್ಯಂತ ಸೆ.10ರಂದು ಸೋಮವಾರ ಭಾರತ್ ಬಂದ್‍ಗೆ ಕರೆ ನೀಡಲಾಗಿದ್ದು, ಜಿಲ್ಲೆಯಾದ್ಯಂತ ಈ ಬಂದ್‍ಅನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸೇರಿದಂತೆ ಸಿಪಿಐ, ಜೆಡಿಎಸ್, ಬಿಎಸ್ಪಿ ಹಾಗೂ ದಲಿತ, ಪ್ರಗತಿಪರ, ರೈತ, ಕನ್ನಡಪರ ಸಂಘಟನೆಗಳು ಸಭೆ ನಡೆಸಿ, ಬಂದ್‍ಗೆ ಸಂಪೂರ್ಣ ಬೆಂಬಲ ನೀಡಲು ತೀರ್ಮಾನಿಸಲಾಗಿದೆ. ಸೋಮವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಶಾಂತಿಯುತವಾಗಿ ಬಂದ್ ಆಚರಿಸಲಾಗುವುದು ಎಂದು ಅವರು ತಿಳಿಸಿದರು.

ಸಿಪಿಐ ಮುಖಂಡ ರೇಣುಕಾರಾಧ್ಯ ಮಾತನಾಡಿ, ಮೋದಿ ಸರಕಾರ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಈ ಬಗ್ಗೆ ಜನತೆ ಪ್ರಶ್ನೆ ಮಾಡಬಾರದೆಂಬ ಕಾರಣಕ್ಕೆ ಪಾಕಿಸ್ತಾನವನ್ನು ತೋರಿಸಿ ಜನರ ಆಲೋಚನಾ ದಿಕ್ಕನ್ನು ಬೇರೆಡೆ ತಿರುಗಿಸುವ ಹುನ್ನಾರವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಆದರೆ ದೇಶದ ಜನತೆ ದಡ್ಡರಲ್ಲ ಎಂಬುದನ್ನು ತೋರಿಸಲು ಬಂದ್ ಕರೆ ನೀಡಲಾಗಿದೆ. ಭಾರತ್ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಆಸ್ಪತ್ರೆ, ಮೆಡಿಕಲ್‍ಶಾಪ್, ಹಾಲು ಪೂರೈಕೆ ಎಂದಿನಂತೆ ಇರಲಿದೆ. ಉಳಿದಂತೆ ಬಹುತೇಕ ಅಂಗಡಿ, ಮುಂಗಟ್ಟುಗಳು ಬಂದ್ ಇರುತ್ತವೆ. ಆಟೊ, ಖಾಸಗಿ ಬಸ್ ಮಾಲಕರು ಬಂದ್‍ಗೆ ಬೆಂಬಲ ನೀಡಿರುವುದರಿಂದ ಇವುಗಳ ಸೇವೆಯೂ ಲಭ್ಯವಿರುವುದಿಲ್ಲ. ಸರಕಾರಿ ಸಾರಿಗೆ ಸಂಸ್ಥೆಯೂ ಬಂದ್‍ಗೆ ಬೆಂಬಲ ಸೂಚಿಸಿರುವುದಿಂದ ಸಾರಿಗೆ ಬಸ್‍ಗಳ ಸೇವೆಯೂ ಬಹುತೇಕ ಬಂದ್ ಇರುತ್ತದೆ ಎಂದ ಅವರು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಬಂದ್ ಆಚರಿಸಲಾಗುತ್ತಿದ್ದು, ವಿವಿಧ ರಾಜಕೀಯ ಪಕ್ಷ, ಸಂಘಟನೆಗಳ ಮುಖಂಡರು ಬಂದ್ ವೇಳೆ ಅಲ್ಲಲ್ಲಿ ಸಭೆ, ಪ್ರತಿಭಟನೆಗಳನ್ನು ಹಮ್ಮಿಕೊಂಡು ಈ ಬಗ್ಗೆ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಲಿದ್ದಾರೆಂದರು. ಬೆಲೆ ಏರಿಕೆಯಿಂದ ಜನಸಾಮಾನ್ಯರಿಗಾಗುತ್ತಿರುವ ಸಮಸ್ಯೆ ಪರಿಗಣಿಸಿ ಸಾರ್ವಜನಿಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಬಂದ್‍ಗೆ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್, ಹಸಿರು ಸೇನೆಯ ಗುರುಶಾಂತಪ್ಪ, ಕರವೇ ಯುವಸೇನೆಯ ನೂರುಲ್ಲಾ ಖಾನ್, ಕನ್ನಡಸೇನೆಯ ಜಯಕುಮಾರ್, ಲಾರಿ ಮಾಲಕರ ಸಂಘದ ಸೋಮಾನಾಯ್ಕ, ಕಾಂಗ್ರೆಸ್ ವಕ್ತಾರ ಶಿವಾನಂದಸ್ವಾಮಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News