ಸರ್ವೇಜನಾ ಸುಖಿನೋಭವಂತು ಸ್ಕೌಟ್ಸ್ ಆಂಡ್ ಗೈಡ್ಸ್ ನ ಧ್ಯೇಯ: ಪಿಜಿಆರ್ ಸಿಂಧ್ಯಾ

Update: 2018-09-08 11:46 GMT

ಚಿಕ್ಕಮಗಳೂರ, ಸೆ.8: ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಉತ್ತಮ ಯುವಪೀಳಿಗೆಯನ್ನು ಸೃಷ್ಟಿಸುವುದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಖ್ಯ ಗುರಿ. ಸರ್ವೇಜನ ಸುಖಿನೋಭವಂತು ಎಂಬುದು ಸಂಸ್ಥೆಯ ಧ್ಯೇಯವಾಗಿದೆ. ಸಂಸ್ಥೆಯ ನಿಯಮಾವಳಿಗಳನ್ನು ವಿದ್ಯಾರ್ಥಿಗಳು ಚಾಚೂ ತಪ್ಪದೇ ಪಾಲಿಸಿದಲ್ಲಿ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತ ಹಾಗೂ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಅಭಿಪ್ರಾಯಿಸಿದ್ದಾರೆ.

ನಗರದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಚೇರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಾತ್ಯತೀತ, ಪಕ್ಷಾತೀತ ಸಂಸ್ಥೆಯಾಗಿದ್ದು, ಸಂಸ್ಥೆ ವತಿಯಿಂದ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗಾಗಿ ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಗಣನೀಯ ಹೆಚ್ಚಳವಾಗಿದೆ. ಶಿಕ್ಷಣ ಇಲಾಖೆ ಮೂಲಕ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಟುವಟಿಕೆ ನಡೆಯುತ್ತಿರುವುದರಿಂದ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಸಂಸ್ಥೆಯೊಂದಿಗೆ ಸಂಪೂರ್ಣ ಸಹಕಾರ ನೀಡಿದಲ್ಲಿ ಇದರ ಚಟುವಟಿಗೆಯ ವ್ಯಾಪ್ತಿ ಇನ್ನೂ ಹೆಚ್ಚಲಿದೆ. ಭವಿಷ್ಯದಲ್ಲಿ ಉತ್ತಮ ಯುವಪೀಳಿಗೆಯನ್ನು ದೇಶಕ್ಕೆ ನೀಡಲು ಸಾಧ್ಯವಿದೆ ಎಂದರು.

ಚಿಕ್ಕಮಗಳೂರು ಜಿಲ್ಲಾಧಿಕಾರಿ ಶ್ರೀರಂಗಯ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಏಳಿಗೆಗೆ ಶ್ರಮಿಸಿದ್ದಾರೆ. ರಾಜ್ಯದ 140 ಹಿಂದುಳಿದ ತಾಲೂಕುಗಳ ಪೈಕಿ ತುಮಕೂರಿನ ಮೊಳಕಾಲ್ಮೂರು ತಾಲೂಕು ಅತ್ಯಂತ ಹಿಂದುಳಿದ ತಾಲೂಕಾಗಿದೆ. ಇಂತಹ ತಾಲೂಕು ವ್ಯಾಪ್ತಿಯ ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯನ್ನು ಹುಟ್ಟು ಹಾಕಿ ಸಾವಿರಾರು ಶಿಸ್ತಿನ ಶಾಲಾ ಮಕ್ಕಳನ್ನು ಹುಟ್ಟುಹಾಕಿದ ಕೀರ್ತಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರಿಗೆ ಸಲ್ಲಬೇಕು. ಚಿಕ್ಕಮಗಳೂರು ಜಿಲ್ಲೆಯಲ್ಲೂ ಅವರು ಸಂಸ್ಥೆಯ ಏಳಿಗೆಗೆ ಸಂಪೂರ್ಣ ಸಹಕಾರ ನಿಡಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಬಗ್ಗೆ ಅವರಿಗಿರುವ ಕಾಳಜಿ, ಬದ್ಧತೆ ಪ್ರಶ್ನಾತೀತ ಎಂದು ಪಿಜಿಆರ್ ಸಿಂಧ್ಯಾ ಇದೇ ವೇಳೆ ಪ್ರಶಂಸಿದರು.

ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಎ.ಎನ್.ಮಹೇಶ್ ಮಾತನಾಡಿ, ಹಿಂದೆ ಜಿಲ್ಲೆಯಲ್ಲಿ ಸಂಸ್ಥೆಯ ಕಾರ್ಯ ಚಟುವಟಿಕೆ ಹೆಚ್ಚಿತ್ತು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇತ್ತೀಚಿಗೆ ಜಿಲ್ಲೆಯಲ್ಲಿ ಈ ಚಟುವಟಿಕೆ ಕುಂಠಿತಗೊಂಡಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ರಾಜ್ಯ ಆಯುಕ್ತರು ಹೆಚ್ಚು ಸಹಕಾರ ನೀಡಬೇಕೆಂದು ಮನವಿ ಮಾಡಿದ ಅವರು, ನಗರದಲ್ಲಿ ಸಂಸ್ಥೆಯ ಕಚೇರಿ ಕಟ್ಟಡ ಉದ್ಘಾಟನೆಯಾಗಿದ್ದು, ಸಂಸ್ಥೆಯ ಎರಡು ಕ್ಯಾಂಪ್ ಸೈಟ್‍ಗಳಿಗೆ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನದ ಅಗತ್ಯವಿದೆ. ರಾಜ್ಯ ಸಂಸ್ಥೆ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಪಿಜಿಆರ್ ಸಿಂಧ್ಯಾ ಅವರು ಆಯುಕ್ತರಾದ ಮೇಲೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ರಾಜ್ಯಾದ್ಯಂತ ಹೆಚ್ಚು ಕ್ರಿಯಾಶೀಲವಾಗಿದೆ ಎಂದರು.

ಇದೇ ವೇಳೆ ಸಂಸ್ಥೆಯ 18 ವಿದ್ಯಾರ್ಥಿಗಳಿಗೆ 2017-18ನೇ ಸಾಲಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಶಸ್ತಿ ಹಾಗೂ ನಂದಕುಮರ್ ಅವರಿಗೆ ಎಚ್‍ಡ್ಲೂಬಿ ಪ್ರಶಸ್ತಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಡಿಡಿಪಿಯು ಮಲ್ಲಿಕಾರ್ಜುನ್, ಡಿಟಿಸಿ ಸಂಧ್ಯಾರಾಣಿ, ಸಂಸ್ಥೆಯ ಕಾರ್ಯದರ್ಶಿ ಶಶಧರ್, ಜಿಲ್ಲಾ ಗೈಡ್ಸ್ ಆಯುಕ್ತೆ ಅನಿತಾ ನಾಗೇಂದ್ರ, ಎಡಿಸಿ ಭಾರತಿ ಚಂದ್ರಶೇಖರ್, ಕಿರಣ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News