ಗೌರಿ ಗಣೇಶ-ಮೊಹರ್ರಂ ಪ್ರಯುಕ್ತ ಶಾಂತಿ ಸಭೆ: ಅಹಿತಕರ ಘಟನೆಗಳಿಗೆ ಆಸ್ಪದ ನೀಡದಿರಲು ಎಸ್ಪಿ ಅಣ್ಣಾಮಲೈ ಮನವಿ

Update: 2018-09-08 11:56 GMT

ಚಿಕ್ಕಮಗಳೂರು, ಸೆ.8: ಈ ಬಾರಿ ಗೌರಿ, ಗಣೇಶ ಮತ್ತು ಮೊಹರ್ರಂ ಏಕಕಾಲದಲ್ಲಿ ಆಗಮಿಸಿದ್ದು, ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಹಬ್ಬಗಳನ್ನು ಶಾಂತಿಯುತವಾಗಿ ನಡೆಸಲು ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಅಣ್ಣಾಮಲೈ ಮನವಿ ಮಾಡಿದ್ದಾರೆ.

ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗಿದ್ದ ಗೌರಿ ಗಣೇಶ ಮತ್ತು ಮೊಹರಂ ಪ್ರಯುಕ್ತ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗೌರಿ, ಗಣೇಶ ಮತ್ತು ಮೊಹರ್ರಂ ಏಕಕಾಲದಲ್ಲಿ ಬಂದಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲರೂ ನೋಡಿಕೊಳ್ಳಬೇಕು. ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗದ ರೀತಿಯಲ್ಲಿ ಹಬ್ಬಗಳನ್ನು ಆಚರಿಸಬೇಕೆಂದು ತಿಳಿಸಿದರು.

ಗ್ರಾಮಾಂತರ ವೃತ್ತ ವ್ಯಾಪ್ತಿಯಲ್ಲಿ 328 ಹಾಗೂ ನಗರ ವೃತ್ತ ವ್ಯಾಪ್ತಿಯಲ್ಲಿ 90 ಗಣಪತಿಗಳನ್ನು ಕೂರಿಸಲು ಅನುಮತಿ ಪಡೆದುಕೊಳ್ಳಲಾಗಿದೆ. ಎಲ್ಲ ಗಣಪತಿಗಳನ್ನೂ ಏಕಕಾಲದಲ್ಲಿ ವಿಸರ್ಜಿಸಲು ಕೋರಿದಾಗ ಅದಕ್ಕೆ ಅನುಮತಿ ನೀಡಿಲ್ಲ. ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಗಳನ್ನು ರಾತ್ರಿ 10 ಗಂಟೆಯ ಒಳಗೆ ಪೂರ್ಣಗೊಳಿಸಬೇಕು. ರಾತ್ರಿ 10ರ ಬಳಿಕ ಧ್ವನಿವರ್ಧಕಗಳನ್ನು ಬಳಸಲು ಅವಕಾಶವಿಲ್ಲ ಎಂದು ಹೇಳಿದರು.

ಗಣಪತಿಯನ್ನು ವಿಸರ್ಜಿಸುವ ಸಂದರ್ಭದಲ್ಲಿ ಆದಷ್ಟು ಕಡಿಮೆ ಸಂಖ್ಯೆಯ ಜನರನ್ನು ಸೇರಿಸಿಕೊಳ್ಳಬೇಕೆಂದ ಅವರು, ಹೆಚ್ಚಿನ ಜನ ಸೇರಿದಷ್ಟು ತೊಂದರೆಗಳಾಗುವ ಸಾಧ್ಯತೆಗಳು ಇರುತ್ತವೆ. ಏನೇ ತೊಂದರೆಯಾದರೂ ಅದಕ್ಕೆ ಆಯೋಜಕರೇ ಕಾರಣರಾಗುವುದರಿಂದ ಆಯೋಜಕರೇ ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ ಎಂದರು.

ಮೊಹರ್ರಂ ದಿನ ಗಣಪತಿಯ ವಿಸರ್ಜನೆ ಮಾಡದಿರುವುದು ಒಳ್ಳೆಯದು. ಒಂದು ವೇಳೆ ಅಂದೇ ವಿಸರ್ಜನೆ ಮಾಡುವುದಿದ್ದರೆ ಸ್ಥಳೀಯ ಠಾಣೆಯಿಂದ ಅನುಮತಿ ಪಡೆದುಕೊಳ್ಳಬೇಕು. ಆಗ ಮೆರವಣಿಗೆಗೆ ಸೂಕ್ತ ಸಮಯದಲ್ಲಿ ನಿಗದಿಗೊಳಿಸಲಾಗುವುದು. ಎರಡೂ ಕೋಮಿನವರು ಶಾಂತಿ ಸುವ್ಯವಸ್ಥೆ ಕಾಪಾಡಲು ಇಲಾಖೆಯೊಡನೆ ಸಹಕರಿಸುವಂತೆ ಕೋರಿದ ಅವರು, ಗಣಪತಿ ವಿಸರ್ಜನೆಯ ದಿನ, ಸಮಯ, ಮೆರವಣಿಗೆ ಹೋಗುವ ಮಾರ್ಗ ಎಲ್ಲವನ್ನೂ ನಮೂದಿಸಿ ಸ್ಥಳೀಯ ಠಾಣೆಗೆ ಮನವಿ ಸಲ್ಲಿಸಿದರೆ ಸಂಬಂಧಿಸಿದ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವರು ಎಂದು ತಿಳಿಸಿದರು.

ಗಣಪತಿ ಕೂರಿಸಲು ನಗರಸಭೆ, ಮೆಸ್ಕಾಂ, ಅಗ್ನಿಶಾಮಕ, ಪೊಲೀಸ್ ಅನುಮತಿಯನ್ನು ಒಂದೇ ಸ್ಥಳದಲ್ಲಿ ಕೊಡಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಎಸ್ಪಿ ಅಣ್ಣಾಮಲೈ, ಸೋಮವಾರ ಮತ್ತು ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ನಗರಸಭೆ ಕಚೇರಿಯಲ್ಲಿ ಎಲ್ಲ ಇಲಾಖೆಗಳವರೂ ಇದ್ದು ಏಕಕಾಲದಲ್ಲಿ ಅನುಮತಿ ಕೊಡುತ್ತಾರೆ ಎಂದು ಘೋಷಿಸಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್, ಉಪಾಧ್ಯಕ್ಷ ಸುಧೀರ್, ಸದಸ್ಯ ದೇವರಾಜಶೆಟ್ಟಿ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅಣ್ಣಪ್ಪ ನಾಯಕ್, ತಹಶೀಲ್ದಾರ್ ನಂದಕುಮಾರ್, ನಗರಸಭೆ ಆಯುಕ್ತೆ ತುಷಾರಮಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News