ವೇದಿಕೆಯಲ್ಲಿ ತನ್ನ ತಾಯಿಯ ಭಾವಚಿತ್ರ ಇಲ್ಲವೆಂದು ಕಾರ್ಯಕ್ರಮದಿಂದಲೇ ಹೊರನಡೆದ ಬಿಜೆಪಿ ಸಚಿವೆ!

Update: 2018-09-09 07:45 GMT

ಭೋಪಾಲ್, ಸೆ.9: ಬಿಜೆಪಿಯ ಪ್ರಮುಖ ಮುಖಂಡರು ಹಾಗೂ ಪಕ್ಷದ ಪ್ರಮುಖ ಪದಾಧಿಕಾರಿಗಳು ಸೇರಿದ್ದ ಸಭೆಯಲ್ಲಿ ಪಕ್ಷದ ಭಿನ್ನಮತ ಸ್ಫೋಟಗೊಂಡ ಘಟನೆ ಮಧ್ಯಪ್ರದೇಶ ಸರ್ಕಾರಕ್ಕೆ ಮುಖಭಂಗ ಉಂಟು ಮಾಡಿದೆ.

ತಮ್ಮ ತಾಯಿ ವಿಜಯ ರಾಜೇ ಸಿಂಧ್ಯಾ ಅವರ ಭಾವಚಿತ್ರ ಪೋಡಿಯಂನಲ್ಲಿ ಹಾಕಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ರಾಜ್ಯದ ಕ್ರೀಡಾ ಸಚಿವೆ ಯಶೋಧರ ರಾಜೇ ಸಿಂಧಿಯಾ ಅವರು ಸಭೆಯಿಂದ ಹೊರನಡೆದದ್ದು ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ.

ದೀನದಯಾಳ್ ಉಪಾಧ್ಯಾಯ, ಶ್ಯಾಮಪ್ರಸಾದ್ ಮುಖರ್ಜಿ, ಅಟಲ್‍ ಬಿಹಾರಿ ವಾಜಪೇಯಿ ಹಾಗೂ ಕುಶಭಾಹು ಠಾಕ್ರೆ ಅವರ ಫೋಟೊಗಳಿದ್ದರೂ, ಬಿಜೆಪಿಯ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ಹಾಗೂ ಪಕ್ಷದಲ್ಲಿ ರಾಜಮಾತೆ ಎಂದೇ ಕರೆಸಿಕೊಂಡಿದ್ದ ವಿಜಯರಾಜೇ ಅವರ ಭಾವಚಿತ್ರವನ್ನು ವೇದಿಕೆಯಲ್ಲಿ ಏಕೆ ಹಾಕಿಲ್ಲ ಎಂದು ಏರುಧ್ವನಿಯಲ್ಲಿ ಸಚಿವೆ ಪ್ರಶ್ನಿಸಿದರು.

ರಾಜಧಾನಿ ಭೋಪಾಲ್‍ನ ಹೊರವಲಯದ ಭೈರೋಗಢದಲ್ಲಿ ಸೇರಿದ್ದ ಬಿಜೆಪಿ ಮುಖಂಡರು, ಸಚಿವೆಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಸಾಧ್ಯವಾಗದೇ, ಸಚಿವೆ ಸಭೆಯಿಂದ ಹೊರನಡೆದರು. ರಾಜಮಾತೆ ಭಾವಚಿತ್ರ ಹಾಕದಿರುವುದು ತಪ್ಪು ಎಂದು ರಾಜ್ಯ ಬಿಜೆಪಿ ವಕ್ತಾರ ಒಪ್ಪಿಕೊಂಡರೂ, ಸಮಾರಂಭಕ್ಕೆ ವಾಪಸ್ಸಾಗಲು ಯಶೋಧರ ರಾಜೇ ನಿರಾಕರಿಸಿದರು.

ದೀನ್‍ದಯಾಳ್ ಉಪಾಧ್ಯಾಯ ಅವರ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್ 25ರಂದು ಆಯೋಜಿಸಿರುವ ಕಾರ್ಯಕರ್ತರ ಮಹಾಕುಂಭದಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಸಿದ್ಧತೆಗಳ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News