ಅತ್ಯಾಚಾರ ಆರೋಪ ಮಾಡಿದ ಕ್ರೈಸ್ತ ಸನ್ಯಾಸಿನಿಯನ್ನು ‘ವೇಶ್ಯೆ’ ಎಂದ ಶಾಸಕ!

Update: 2018-09-09 10:27 GMT

ತಿರುವನಂತಪುರ, ಸೆ.9: ಜಲಂಧರ್ ಬಿಷಪ್ ಫ್ರಾಂಕೊ ಮುಲಕ್ಕಲ್ ಮೇಲೆ ಅತ್ಯಾಚಾರ ಆರೋಪ ಹೊರಿಸಿದ ಕ್ರೈಸ್ತ ಸನ್ಯಾಸಿನಿಯನ್ನು ‘ವೇಶ್ಯೆ’ ಎಂದು ಕರೆಯುವ ಮೂಲಕ ಕೇರಳ ಶಾಸಕರೊಬ್ಬರು ವಿವಾದ ಸೃಷ್ಟಿಸಿದ್ದಾರೆ.

"ಆ ಭಗಿನಿ ವೇಶ್ಯೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. 12 ಬಾರಿ ಆಕೆ ಅದನ್ನು ಆನಂದಿಸಿದ್ದಾಳೆ. 13ನೇ ಬಾರಿ ಅದು ಅತ್ಯಾಚಾರವಾಗಿದೆಯೇ?, ಮೊದಲ ಸಲವೇ ಏಕೆ ದೂರು ನೀಡಿಲ್ಲ?” ಎಂದು ಪಕ್ಷೇತರ ಶಾಸಕ ಪಿ.ಸಿ.ಜಾರ್ಜ್ ಹೇಳಿದ್ದಾಗಿ ಎಎನ್‍ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಬಿಷಪ್ ಮುಲಕ್ಕಲ್ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬವಾಗಿರುವುದನ್ನು ಖಂಡಿಸಿ ಹಲವು ಕ್ರೈಸ್ತ ಸನ್ಯಾಸಿನಿಯರು ಬೀದಿಗಿಳಿದು ಹೋರಾಟ ನಡೆಸಿದ ಮರುದಿನವೇ ಶಾಸಕರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

2014ರಲ್ಲಿ ಪ್ರಮುಖ ವಿಷಯವೊಂದರ ಬಗ್ಗೆ ಚರ್ಚಿಸಲು ಕರೆಸಿಕೊಂಡ ಬಿಷಪ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು 43 ವರ್ಷದ ಭಗಿನಿ ದೂರಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ 13 ಬಾರಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಅವರು ಹೇಳಿದ್ದಾರೆ. ಆದರೆ ಆಕೆಯ ವಿರುದ್ಧ ಶಿಸ್ತುಕ್ರಮ ಕೈಗೊಂಡಿದ್ದಕ್ಕಾಗಿ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಕೊಟ್ಟಾಯಂ ಮೂಲದ ಬಿಷಪ್ ಮುಲಕ್ಕಲ್ ಹೇಳಿದ್ದಾರೆ. 2009ರಲ್ಲಿ ಇವರನ್ನು ದಿಲ್ಲಿ ಧರ್ಮಪ್ರಾಂತ್ಯದ ಹೆಚ್ಚುವರಿ ಬಿಷಪ್ ಆಗಿ ಹಾಗೂ 2013ರಲ್ಲಿ ಜಲಂಧರ್ ಬಿಷಪ್ ಆಗಿ ನೇಮಕ ಮಾಡಲಾಗಿತ್ತು.

ಶಾಸಕರ ಹೇಳಿಕೆಯನ್ನು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಕಟುವಾಗಿ ಟೀಕಿಸಿದ್ದಾರೆ. ಇಂಥ ಹೇಳಿಕೆ ನಾಚಿಕೆಗೇಡು ಎಂದು ಅವರು ಹೇಳಿದ್ದಾರೆ. ಈ ಶಾಸಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇರಳ ಡಿಜಿಪಿ ಲೋಕನಾಥ್ ಬೆಹೆರಾ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News