ಚಾಮರಾಜನಗರ: ಭಾರತ್ ಬಂದ್‍ ಕರೆಗೆ ವಿವಿಧ ಸಂಘಟನೆಗಳ ಬೆಂಬಲ; ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Update: 2018-09-09 12:39 GMT

ಚಾಮರಾಜನಗರ,ಸೆ.9: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್‍ಗೆ ಗಡಿ ಚಾಮರಾಜನಗರ ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ ದೊರೆತಿದ್ದು, ಭಾರತೀಯ ಜನತಪಾರ್ಟಿ ಹೊರತು ಪಡಿಸಿ ಉಳಿದ ಬಹುತೇಕ ರಾಜಕೀಯ ಪಕ್ಷಗಳು ಬೆಂಬಲ ನೀಡುತ್ತಿದೆ. ಅದೇ ರೀತಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆಯನ್ನು ಘೋಷಿಸಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಚುನಾಯಿತ ಜನಪ್ರತಿನಿಧಿಗಳೇ ಅಧಿಕವಾಗಿರುವ ಹಿನ್ನೆಲೆಯಲ್ಲಿ ಹಾಗೂ ಸಂಸದರು ಮತ್ತು ರಾಜ್ಯ ಸರ್ಕಾರದ ಇಬ್ಬರು ಸಚಿವ ಸಂಪುಟ ಸಚಿವರು ಇರುವುದರಿಂದ ಚಾಮರಾಜನಗರ ಜಿಲ್ಲೆಯಲ್ಲಿ ಬಂದ್ ಯಶಸ್ವಿಯಾಗುವ ಲಕ್ಷಣಗಳಿವೆ ಎನ್ನಲಾಗುತ್ತಿದೆ.

ಖಾಸಗಿ ಬಸ್‍ಗಳ ಸಂಚಾರವೂ ಸಂಪೂರ್ಣವಾಗಿ ನಿಲುಗಡೆಯಾಗಲಿದ್ದು, ಅಲ್ಲದೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮುಂಜಾನೆ ತನಕ ಬಸ್ ಸಂಚಾರ ಇದ್ದು, ನಂತರ ಬಸ್‍ಗಳು ಡಿಪೋ ಸೇರಲಿದೆ. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಣೆ ಮಾಡಲಿದೆ ಎನ್ನಲಾಗಿದೆ. ಎಂದಿನಂತೆ ಆಸ್ಪತ್ರೆಗಳು, ಹಾಲು, ನೀರು, ಔಷಧಿ ಅಂಗಡಿಗಳು ತೆರೆಯಲಿದ್ದು, ರೈಲು ಸಂಚಾರ ಇರುತ್ತದೆ ಎನ್ನಲಾಗಿದೆ.

ಶಾಲಾ ಕಾಲೇಜುಗಳಿಗೆ ರಜೆ: ಭಾರತ್ ಬಂದ್ ನಿಂದ ಜಿಲ್ಲೆಯಾದ್ಯಂತ ವಾಹನ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News