ಕೋಮುಶಕ್ತಿಗಳನ್ನು ಬಗ್ಗುಬಡಿಯದಿದ್ದರೆ ಸಂವಿಧಾನದ ಕಗ್ಗೊಲೆಯಾಗಲಿದೆ: ಪ್ರೊ.ರವಿವರ್ಮಕುಮಾರ್

Update: 2018-09-09 13:07 GMT

ಮೈಸೂರು,ಸೆ.9: ಮುಂಬರುವ ಚುನಾವಣೆಯಲ್ಲಿ ಜನರು ಎಚ್ಚೆತ್ತುಕೊಂಡು ಕೋಮುಶಕ್ತಿಗಳನ್ನು ಬಗ್ಗುಬಡಿಯದಿದ್ದರೆ ಸಂವಿಧಾನದ ಕಗ್ಗೊಲೆಯಾಗಲಿದೆ ಎಂದು ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ಹೇಳಿದರು.

ನಗರದ ಕಿರುರಂಗ ಮಂದಿರದಲ್ಲಿ ರವಿವಾರ ಅಭಿರುಚಿ ಪ್ರಕಾಶನ, ಮೈಸೂರು ಫಿಲಂ ಸೊಸೈಟಿ, ನಿರಂತರ ಮಾನವ ಮಂಟಪ, ಕರ್ನಾಟಕ ರಾಜ್ಯ ರೈತ ಸಂಘ ಇವರ ಸಹಯೋಗಲದಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ-80 ಎರಡುದಿನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದು, ಸಂವಿಧಾನದ ಎಲ್ಲಾ ಸಂಸ್ಥೆಗಳನ್ನು ನಾಶಮಾಡಿದ್ದಾರೆ. ಇಂದು ನಂಬಿಕೆ ಇಟ್ಟಿರುವ ಸಂಸ್ಥೆಯಾವುದಾದರು ಒಂದು ಇದೆ ಅಂದರೆ ಭಾರತ ಚುನಾವಣಾ ಆಯೋಗ. ಚುನಾವಣಾ ಆಯೋಗ ಮುಂಬರುವ ಲೋಕಸಭಾಚುನಾವಣೆಯನ್ನು  ನಿಷ್ಪಕ್ಷಪಾತವಾಗಿ ನಡಸದಿದ್ದರೆ ಸಂವಿಧಾನ, ಕಾನೂನಿನ ಮತ್ತು ಆಡಳಿತದ ಕಗ್ಗೊಲೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಐವರು ಬುದ್ದಿಜೀವಿಗಳನ್ನು ಬಂಧಿಸಿ ಭಯದ ವಾತಾವರಣ ಉಂಟುಮಾಡುವ ಸಂಚನ್ನು ಮೋದಿ ರೂಪಿಸಿದ್ದಾರೆ. ಅವರು ನಗರ ನಕ್ಸಲರೊ ಅಥವಾ ಹಳ್ಳಿಗಾಡಿನ ನಕ್ಸಲರೋ ಏನೇ ಆಗಿರಲಿ ಈ ವಯಸ್ಸಿನಲ್ಲಿ ಅವರು ಮೋದಿಯವರನ್ನು ಕೊಲ್ಲಲು ಸಾಧ್ಯವೆ. ಇವರ ಬಂಧನದ ಮೂಲಕ ಸಮಾಜವನ್ನು ಉಸಿರುಗಟ್ಟುವ ವಾತಾವರಣ ಸೃಷ್ಟಿಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಮುವಾದಿಶಕ್ತಿಗಳನ್ನು ಧಮನಮಾಡುವ ಕಾಲ ಸನ್ನಿಹಿತವಾಗಿದ್ದು, ಎಲ್ಲರೂ ಎಚ್ಚೆತ್ತುಕೊಂಡು ಕೋಮುವಾದಿಗಳನ್ನು ಸೋಲಿಸುವವರೆಗೂ ವಿರಮಿಸಬಾರದು. ಜಾತ್ಯಾತೀತ ರಾಷ್ಟ್ರವನ್ನು ಪುನರ್ ಸ್ಥಾಪಿಸಿ ಮುಕ್ತ ಆಡಳಿತಕ್ಕೆ ಅವಕಾಶ ಕಲ್ಪಿಸುವ ಸಂಕಲ್ಪಮಾಡಬೇಕಿದೆ ಎಂದು ಕರೆ ನೀಡಿದರು.

ಸೊಹ್ರಾಬುದ್ದೀನ್ ಪ್ರಕರಣದ ಮರ್ಡರ್ ಕೇಸ್‍ನಲ್ಲಿ ಅಮಿತ್‍ ಶಾ ಶಾಮಿಲಾಗಿದ್ದಾರೆ ಎಂಬ ತೀರ್ಪು ಪ್ರಕಟಿಸಿದ ಇಬ್ಬರು ನ್ಯಾಯಮೂರ್ತಿಗಳನ್ನು ಕರ್ನಾಟಕಕ್ಕೆ ವರ್ಗಾವಣೆ ಮಾಡಿ ಅವರಿಗೆ ಮುಂಬಡ್ತಿ ನೀಡದೆ ಅಪಮಾನಿಸಲಾಗಿದೆ. ಜೊತೆಗೆ ಈ ಪ್ರಕರಣವನ್ನು ಮುಚ್ಚಿಹಾಕುವ ಸಂಚನ್ನು ರೂಪಿಸಲಾಗಿದೆ. ಪ್ರಕರಣದ 54 ಸಾಕ್ಷಿಗಳನ್ನು ನಾಶಮಾಡಲಾಗಿದೆ. ಇಂತಹ ಅಮಿತ್ ಶಾ ನಮ್ಮನ್ನು ಆಳುತ್ತಿರುವುದು ವಿಪರ್ಯಾಸ ಎಂದು ಹೇಳಿದರು.

ಬಹಳಷ್ಟು ನಾಯಕರು ಆಡಳಿತವನ್ನು ನಡೆಸಿದ್ದಾರೆ. ಅವರ್ಯಾರು ಮೋದಿ ತರಹದ ಸರ್ವಾಧಿಕಾರಿ ಧೋರಣೆ ಹೊಂದಿರಲಿಲ್ಲ. ನೋಟು ಅಮಾನ್ಯೀಕರಣ ಸಂದರ್ಭದಲ್ಲೂ ಮೋದಿ ಆರ್.ಬಿ.ಐ ಗವರ್ನರ್ ಮತ್ತು ಹಣಕಾಸು ಸಚಿವರಿಗೂ ತಿಳಿಸದೆ ಏಕ ತೀರ್ಮಾನಕೈಗೊಂಡು ಜನರನ್ನು ಸಂಕಷ್ಟಕ್ಕೆ ದೂಡಿದರು. ನ್ಯಾಯಾಂಗದಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎಂದು ನ್ಯಾಯಮೂರ್ತಿಗಳೇ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಇನ್ನೂ ಇದೇ ವಾತಾವರಣದ ಮುಂದುವರೆದರೆ ಸಂವಿಧಾನವನ್ನು ನಾಶಮಾಡುತ್ತಾರೆ ಎಂದು ಹೇಳಿದರು.

ಜಾತ್ಯಾತೀತ, ಬಹುಮುಖ ಸಮಾಜವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಹೋರಾಡುವ ಅವಶ್ಯಕತೆ ಇದೆ. ನಮ್ಮನ್ನಾಳುತ್ತಿರುವ ಕೋಮುಶಕ್ತಿಗಳನ್ನು ಬಗ್ಗುಬಡಿದು ಜಾತ್ಯಾತೀತ ರಾಷ್ಟ್ರ ನಿರ್ಮಾಣಮಾಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತೇಜಸ್ವಿ ಒಡನಾಡಿ ಪ್ರೊ.ಬಿ.ಎನ್.ಶ್ರೀ ರಾಮ ಅಧ್ಯಕ್ಷತೆ ವಹಿಸಿದ್ದರು. ಅಭಿರುಚಿ ಗಣೇಶ್ ಉಪಸ್ಥಿತರಿದ್ದರು. ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ರೈತ ಸಂಘದ ಬಡಗಲಪುರ ನಾಗೇಂದ್ರ, ಸಾಹಿತ ಗೋವಿಂದರಾಜು, ದಲಿತ ಮುಖಂಡ ವಾಸು ಉಪಸ್ಥಿತರಿದ್ದರು.

ಎಷ್ಟೇ ಸಂಕಷ್ಟದ ಸಂದರ್ಭವನ್ನು ತಿಳಿಗೊಳಿಸುವ ಸಾಮರ್ಥ್ಯ ಪೂರ್ಣಚಂದ್ರ ತೇಜಸ್ವಿ ಅವರಿಗಿತ್ತು. ರಸ್ತೆಯಲ್ಲಿ ಇರುವ ಯಾವುದೇ ವಿಚಾರನ್ನು ಕಥೆಯರೂಪದಲ್ಲಿ ಅದ್ಭುತವಾಗಿ ಬರೆಯುತ್ತಿದ್ದರು. ಬೇರೆ ಭಾಷೆಯ ಸಾಹಿತ್ಯವನ್ನು ಆ ಭಾಷೆಗಿಂತ ಅದ್ಭುತವಾಗಿ ವರ್ಗಾಯಿಸುತ್ತಿದ್ದರು. ಅವರು ಜೀವನದಲ್ಲಿ ಸಾಕಷ್ಟು ರಿಸ್ಕ್ ತೆಗೆದುಕೊಂಡು ಸಾಧನೆ ಮಾಡಿದ್ದಾರೆ. ಸಣ್ಣ ಮಕ್ಕಳು ಸಹ ಪೂರ್ಣಚಂದ್ರ ತೇಜಸ್ವಿ ಅವರ ಪ್ರಭಾವಕ್ಕೆ ಒಳಗಾಗಿದ್ದರು. 
-ಪ್ರೊ.ರವಿವರ್ಮಕುಮಾರ್, ಹಿರಿಯ ನ್ಯಾಯವಾದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News