ನಾಳೆ ಭಾರತ್ ಬಂದ್: ಕರ್ನಾಟಕ ಸಂಪೂರ್ಣ ಸ್ತಬ್ಧವಾಗುವ ಸಾಧ್ಯತೆ

Update: 2018-09-09 13:47 GMT

ಕೆಲವು ಸಂಘಟನೆಗಳಿಂದ ಬಂದ್‌ಗೆ ವಿರೋಧ

ಬೆಂಗಳೂರು, ಸೆ.9: ಪ್ರೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ದರ ಹೆಚ್ಚಳ ಮಾಡುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ನಾಳೆ(ಸೋಮವಾರ) ಕರೆ ನೀಡಿರುವ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಪೂರ್ಣ ಸ್ತಬ್ಧವಾಗುವ ಸಾಧ್ಯತೆಯಿದೆ.

ಭಾರತ್ ಬಂದ್‌ಗೆ ಕಾಂಗ್ರೆಸ್ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೊರತುಪಡಿಸಿ ಜೆಡಿಎಸ್, ಸಿಪಿಐ, ಸಿಪಿಎಂ, ಬಿಎಸ್ಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು, ಕನ್ನಡ ಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಆಟೋ, ಟ್ಯಾಕ್ಸಿ, ಟೆಂಪೋ ಚಾಲಕರು, ಮಾಲಕರು ಬೆಂಬಲ ನೀಡಿದ್ದಾರೆ. ಇನ್ನುಳಿದಂತೆ ಬಂದ್‌ಗೆ ಕೆಲವು ಹೋಟೆಲ್ ಮಾಲಕರು, ಸಂಘಟನೆಗಳು ವಿರೋಧವೂ ವ್ಯಕ್ತಪಡಿಸಿವೆ.

ಕೆಎಸ್ಸಾರ್ಟಿಸಿ, ಬಿಎಂಟಿಸಿ ಚಾಲಕರ ಮತ್ತು ನಿರ್ವಾಹಕ ಸಂಘಟನೆಗಳು ಬೆಂಬಲ ನೀಡುತ್ತಿರುವುದರಿಂದ ಬಸ್‌ಗಳು ಸಂಚಾರ ಮಾಡುವುದು ಅನುಮಾನ. ಚಲನಚಿತ್ರಮಂದಿರಗಳು, ಮಾಲ್‌ಗಳು ಮುಚ್ಚಲು ತೀರ್ಮಾನಿಸಲಾಗಿದೆ. ಆಟೋ, ಟ್ಯಾಕ್ಸಿ, ಟೆಂಪೋಗಳು ಸಂಚರಿಸದಿರಲು ನಿರ್ಧರಿಸಿವೆ. ಇದರಿಂದಾಗಿ, ವಾರಾಂತ್ಯದಲ್ಲಿ ಊರಿಗೆ ತೆರಳಿದ್ದವರಿಗೆ ಹಿಂದಿರುಗಲು ತೀವ್ರ ತೊಂದರೆಯುಂಟಾಗುವ ಸಾಧ್ಯತೆಯಿದೆ.

ಲಾರಿ ಮಾಲಕರು ಮತ್ತು ಚಾಲಕರ ಸಂಘಗಳ ಒಕ್ಕೂಟ ಬಂದ್‌ಗೆ ತಟಸ್ಥ ನೀತಿ ಅನುಸರಿಸಲು ನಿರ್ಧರಿಸಿದೆ. ಮೆಟ್ರೋ ರೈಲು ಹಾಗೂ ನೈಋತ್ಯ ರೈಲು ಸಂಚಾರ ಎಂದಿನಂತೆ ಇರಲಿದೆ. ಆದರೆ, ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಔಷಧಿ ಅಂಗಡಿ, ಆಸ್ಪತ್ರೆ, ಹಣ್ಣು-ತರಕಾರಿ, ಹಾಲು, ತರಕಾರಿ, ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಸೇವೆಗಳ ಮೇಲೆ ಬಂದ್‌ನ ಪರಿಣಾಮ ಬೀರಲಿದೆ. ಸರಕಾರಿ ಕಚೇರಿಗಳು, ಬ್ಯಾಂಕುಗಳು ಮುಚ್ಚುವ ಸಾಧ್ಯತೆಗಳಿವೆ.

ಖಾಸಗಿ ಶಾಲೆಗಳ ಒಕ್ಕೂಟ ಬಂದ್ ಬೆಂಬಲಿಸಿ ಶಾಲೆಗಳಿಗೆ ರಜೆ ಘೋಷಿಸಲಿದೆ. ಸರಕಾರಿ ಶಾಲೆಗಳಿಗೆ ರಜೆ ಘೋಷಿಸುವ ಸಂಬಂಧ ಆಯಾ ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ವಿವೇಚನೆಗೆ ಬಿಡಲಾಗಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಗಗನ್ಕಕೇರುತ್ತಿರುವುದು ಸಹಜವಾಗಿ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆದುದರಿಂದಾಗಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಬಂದ್‌ಗೆ ಪಾಲ್ಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಾಂಗ್ರೆಸ್ ಪಕ್ಷ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೈತ್ರಿಪಕ್ಷ ಜೆಡಿಎಸ್, ಎಡ ಪಕ್ಷಗಳು ಹಾಗೂ ಇನ್ನಿತರೆ ಪಕ್ಷಗಳೊಂದಿಗೆ ಸಭೆ ನಡೆಸಿದ್ದು, ಬಂದ್ ಯಶಸ್ವಿಗೊಳಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರು ಬಂದ್‌ಗೆ ಬೆಂಬಲ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಅಲ್ಲದೆ, ಬಿಎಸ್ಪಿ ವಿಶೇಷವಾದ ಹೋರಾಟ ಮಾಡುವುದಾಗಿ ತಿಳಿಸಿದೆ. ಇನ್ನುಳಿದಂತೆ ಎಡ ಪಕ್ಷಗಳ ಕಾರ್ಮಿಕ, ರೈತ ಸಂಘಟನೆಗಳು, ಐಟಿ-ಬಿಟಿ ಕಂಪೆನಿಗಳು ಬಂದ್‌ನಲ್ಲಿ ಪಾಲ್ಗೊಳ್ಳಲಿವೆ. ಹೀಗಾಗಿ, ಇಂದು ಸಂಪೂರ್ಣ ಬಂದ್ ಆಗುವ ಎಲ್ಲ ಸಾಧ್ಯತೆಗಳಿವೆ.

ಹೆಚ್ಚುವರಿ ಒಂದು ಗಂಟೆ ಅಂಗಡಿ ಓಪನ್:

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್ ವಿಫಲಗೊಳಿಸಲು ಸಕಲ ರೀತಿಯ ಪ್ರಯತ್ನ ನಡೆಸಲಾಗುತ್ತಿದ್ದು, ಈ ಪೈಕಿ ಕೆಲ ಅಂಗಡಿ ಹಾಗೂ ಹೋಟೆಲ್‌ಗಳ ಮಾಲಕರು ತಾವು ಬಂದ್ ವಿರೋಧಿಸಿ ಹೆಚ್ಚುವರಿ 1 ಗಂಟೆ ಅಂಗಡಿ ತೆರೆಯುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಫೋಟೋಗಳು ಹರಿದಾಡುತ್ತಿದ್ದು, ನಿತ್ಯ ಬಳಕೆಯ ವಸ್ತುಗಳ ಅಂಗಡಿ ಮಾಲಕರೂ ಸೇರಿದಂತೆ ದಿನಸಿ, ತರಕಾರಿ ಮತ್ತು ಇತರೆ ಮಳಿಗೆ ಮಾಲಕರು ತಮ್ಮ ತಮ್ಮ ಅಂಗಡಿ ಮುಂದೆ ಈ ಕುರಿತು ಬೋರ್ಡ್ ಹಾಕಿ ಕೊಂಡು ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಗೈರಾದರೆ ಶಿಸ್ತು ಕ್ರಮ, ನೋಟಿಸ್: ಸಾರಿಗೆ ಸಂಸ್ಥೆಯ ನೌಕರರು ಬಸ್ ಸೇವೆ ಸ್ಥಗಿತಗೊಳಿಸಿ, ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ಈ ಮಧ್ಯೆ ಸೆ.10ರಂದು ಕರ್ತವ್ಯಕ್ಕೆ ಗೈರಾಗುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ವೇತನ ಕಡಿತ ಮಾಡಲಾಗುತ್ತದೆ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.

‘ಡಿಸೇಲ್, ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಇಂದು ಭಾರತ್ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಸರಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News