ಪ್ರವಾಸಿಗರಿಗೆ ಇನ್ನು ಕೊಡಗು ಮುಕ್ತ: ನಿರ್ಬಂಧ ತೆರವುಗೊಳಿಸಿದ ಜಿಲ್ಲಾಡಳಿತ

Update: 2018-09-09 13:37 GMT

ಮಡಿಕೇರಿ, ಸೆ.9 :ಮಹಾಮಳೆಯ ಕಾರಣದಿಂದ ನರಕದಂತಾಗಿದ್ದ ಪ್ರವಾಸಿಗರ ಸ್ವರ್ಗ ಕೊಡಗು ಇದೀಗ ಮತ್ತೆ ತನ್ನ ಅತಿಥಿಗಳಿಗಾಗಿ ಮಹಾದ್ವಾರ ತೆರೆದು ಕುಳಿತಿದೆ. ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ಜಿಲ್ಲಾಡಳಿತ ಸೆ.10 ರಿಂದ ಮತ್ತೆ ಪ್ರವಾಸಿಗರು ಕೊಡಗು ಜಿಲ್ಲೆ ಪ್ರವೇಶಿಸುವುದಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ.

ಎಡೆಬಿಡದೆ ಸುರಿದ ಧಾರಾಕಾರ ಮಳೆಯಿಂದಾಗಿ ಗುಡ್ಡಗಳು ಕುಸಿದು ಕೆಸರಿನಾರ್ಭಟಕ್ಕೆ ಗ್ರಾಮಗಳು ಕೊಚ್ಚಿ ಹೋಗಿದ್ದವು. ಜಿಲ್ಲೆಯಲ್ಲಿ ಆತಂಕದ ವಾತಾವರಣ ಮನೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಆ.20 ರಿಂದ 31 ರವರೆಗೆ ಪ್ರವಾಸಿಗರು ಆಗಮಿಸುವುದು ಬೇಡವೆಂದು ನಿರ್ಬಂಧ ವಿಧಿಸಿದ್ದರು. ಆದರೆ ಈ ಆದೇಶ ಸೆ.9 ರವರೆಗೂ ಮುಂದುವರೆದಾಗ ಸಹಜವಾಗಿಯೇ ನಷ್ಟದಲ್ಲಿ ಮುಳುಗಿದ್ದ ರೆಸಾರ್ಟ್, ಹೊಟೇಲ್, ಹೋಂ ಸ್ಟೇ ಮಾಲಕರು ಹಾಗೂ ವ್ಯಾಪಾರಸ್ಥರು ಕಂಗಾಲಾದರು. ಅಲ್ಲದೆ ತಮಗಾದ ಕಷ್ಟನಷ್ಟದ ಬಗ್ಗೆ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಟ್ಟ ಪ್ರಮುಖರು ಸೆ.9 ರ ನಂತರ ನಿರ್ಬಂಧವನ್ನು ತೆರವುಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸೆ.10 ರಿಂದ ಪ್ರವಾಸಿಗರು ಜಿಲ್ಲೆಗೆ ಬರಬಹುದೆಂದು ಆದೇಶ ಹೊರಡಿಸಿದ್ದಾರೆ. 

ಆದರೆ ಹೆಸರುವಾಸಿ ಪ್ರವಾಸಿತಾಣಗಳಾದ ಅಬ್ಬಿ ಜಲಪಾತ, ಮಾಂದಲಪಟ್ಟಿ ಹಾಗೂ ತಡಿಯಂಡಮೋಳ್ ಪ್ರದೇಶಕ್ಕೆ ತೆರಳುವ ರಸ್ತೆ ಅವ್ಯವಸ್ಥೆಯಿಂದ ಕೂಡಿರುವುದರಿಂದ ರಸ್ತೆ ದುರಸ್ತಿಯಾಗದೆ ಈ ಪ್ರವಾಸಿತಾಣಗಳಿಗೆ ಪ್ರವಾಸಿಗರು ಹೋಗುವುದು ಬೇಡವೆಂದು ತಿಳಿಸಿದ್ದಾರೆ. ಅಪಾಯದಂಚಿನಲ್ಲಿರುವ ಪ್ರವಾಸಿತಾಣಗಳಿಗೂ ತೆರಳದಂತೆ ಮನವಿ ಮಾಡಿರುವ ಜಿಲ್ಲಾಧಿಕಾರಿ ಶ್ರೀವಿದ್ಯಾ, ಅತಿವೃಷ್ಟಿ ಹಾನಿಯಿಂದಾಗಿ ಕೆಲವು ಪ್ರದೇಶಗಳಲ್ಲಿ ಅಪಾಯದ ಸ್ಥಿತಿ ಇದ್ದು, ಇಂಥ ಪ್ರದೇಶಗಳಿಗೆ ಪ್ರವಾಸಿಗರು ಹೋಗಬಾರದು ಮತ್ತು ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ನೀಡುವ ಸಲಹೆ, ಸೂಚನೆಗಳನ್ನು ಪಾಲಿಸಬೇಕೆಂದು ತಿಳಿಸಿದ್ದಾರೆ. 

ಪ್ರವಾಸೋದ್ಯಮ ಸಂಕಷ್ಟದಲ್ಲಿತ್ತು
ಕೇವಲ ಬೇಸಿಗೆ ಕಾಲದಲ್ಲಿ ಮಾತ್ರ ಕೂಲ್ ಕೊಡಗಿನ ಕಡೆ ಮುಖ ಮಾಡುತ್ತಿದ್ದ ಪ್ರವಾಸಿಗರು ಇತ್ತೀಚಿನ ವರ್ಷಗಳಲ್ಲಿ “ಮಾನ್ಸೂನ್ ಟೂರಿಸಂ” ಪರಿಕಲ್ಪನೆಗೆ ಮಾರು ಹೋಗಿ ಮಳೆಗಾಲದಲ್ಲೂ ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಕಿಕ್ಕಿರಿದು ಸೇರುತ್ತಿದ್ದರು. ಮಳೆ, ಚಳಿ, ಮಂಜು, ಗಾಳಿಯ ನಡುವೆ ಮೋಜು, ಮಸ್ತಿ ಮಾಡುತ್ತಿದ್ದರು. ಹಸಿರ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಸರ್ವ ಋತುವಿನಲ್ಲೂ ಪ್ರವಾಸಿಗರು ಕೊಡಗಿನ ಮೂಲೆ ಮೂಲೆಯಲ್ಲಿ ಕಂಡು ಬರಲು ಆರಂಭವಾದ ನಂತರ ಹೆಚ್ಚು-ಹೆಚ್ಚು ರೆಸಾರ್ಟ್, ಹೊಟೇಲ್, ಹೋಂಸ್ಟೇಗಳು ನಿರ್ಮಾಣಗೊಂಡು ಒಂದಷ್ಟು ಯುವ ಸಮೂಹಕ್ಕೆ ಉದ್ಯೋಗ ಅವಕಾಶವನ್ನು ಕಲ್ಪಿಸಿತು. ಕೆಲವು ಭೂಮಾಲಕರು ಕೂಡ ತೋಟದೊಂದಿಗೆ ಪ್ರವಾಸೋದ್ಯಮವನ್ನು ಉಪ ಕಸುಬನ್ನಾಗಿ ಮಾಡಿಕೊಂಡು ವನ್ಯಜೀವಿ ಮತ್ತು ಹವಾಗುಣದ ಏರುಪೇರಿನಿಂದ ಆಗುತ್ತಿದ್ದ ಬೆಳೆ ನಷ್ಟವನ್ನು ಸರಿದೂಗಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಮೇ ತಿಂಗಳಿನಿಂದಲೇ ಸುರಿಯುತ್ತಿದ್ದ ಮಳೆ ಆಗಸ್ಟ್ ತಿಂಗಳಿನಲ್ಲಿ ಮಹಾಮಳೆಯಾಗಿ ಮಾರ್ಪಟ್ಟು ಕಣ್ಣುಮುಚ್ಚಿ ತೆರೆಯುವಷ್ಟರಲ್ಲೇ ಅನಾಹುತಗಳು ಸಂಭವಿಸಿ ಬಿಟ್ಟವು. ಪ್ರವಾಸಿಗರ ಸ್ವರ್ಗವಾಗಿದ್ದ ಕೊಡಗು ನರಕದಂತಾಯಿತು. 

ಅಪಾಯದ ಮುನ್ಸೂಚನೆ ಅರಿತ ಜಿಲ್ಲಾಡಳಿತ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿತು. ಮೊದಲೇ ಎರಡು ತಿಂಗಳ ಭಾರೀ ಮಳೆಗೆ ಪ್ರವಾಸಿಗರಿಲ್ಲದೆ ಸಾಕಷ್ಟು ನಷ್ಟ ಅನುಭವಿಸಿದ್ದ ಪ್ರವಾಸೋದ್ಯಮದ ಮಂದಿ ಕಳೆದ 20 ದಿನಗಳ ನಿರ್ಬಂಧದಿಂದಾಗಿ ಮತ್ತಷ್ಟು ಆತಂಕವನ್ನು ಎದುರಿಸಿದೆ. ಪ್ರವಾಸೋದ್ಯಮವೇ ಸ್ತಬ್ಧವಾಗಿ ಪ್ರವಾಸಿಗರನ್ನೇ ನಂಬಿ ಬದುಕುತ್ತಿರುವ ಸುಮಾರು 10 ರಿಂದ 15 ಸಾವಿರ ಮಾಲಕರು ಹಾಗೂ ನೌಕರರು ಅತಂತ್ರ ಪರಿಸ್ಥಿತಿಯಲ್ಲಿದ್ದರು. ಬಹಳಷ್ಟು ಮಂದಿ ಹೊರ ಜಿಲ್ಲೆಯ ನೌಕರರು ಭಯದಿಂದ ಕೊಡಗನ್ನೇ ಬಿಟ್ಟಿದ್ದರು. 

ಇದೀಗ ಜಿಲ್ಲಾಡಳಿತ ಕೊಡಗನ್ನು ಮತ್ತೆ ಪ್ರವಾಸಿಗರಿಗಾಗಿ ಮುಕ್ತಗೊಳಿಸಿರುವುದರಿಂದ ಪ್ರವಾಸೋದ್ಯಮಕ್ಕಾಗಿ ಕೋಟ್ಯಾಂತರ ರೂ. ತೊಡಗಿಸಿರುವವರು ನಿಟ್ಟುಸಿರು ಬಿಡುವಂತಾಗಿದೆ. ಮಹಾಮಳೆಯ ವಿನಾಶಕ್ಕೆ ಬಲಿಯಾದ ಕೊಡಗಿನ ಹಾನಿ ಪ್ರದೇಶಗಳು ಹೇಗಿವೆ ಎನ್ನುವ ಕುತೂಹಲಕ್ಕಾದರೂ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ ಎನ್ನುವ ವಿಶ್ವಾಸ ವ್ಯಾಪಾರಸ್ಥರಲ್ಲಿದೆ. 

ಸೂತಕದ ಮನೆಯಲ್ಲಿ ಪ್ರವಾಸೋದ್ಯಮ ಬೇಡ

ಮಹಾಮಳೆಯಿಂದ ಕೊಡಗಿನಲ್ಲಿ ಸಂಭವಿಸಿದ ಅನಾಹುತಗಳಿಗೆ ಪ್ರವಾಸೋದ್ಯಮದ ಒತ್ತಡವೇ ಪ್ರಮುಖ ಕಾರಣವೆಂದು ಅಭಿಪ್ರಾಯಪಡುತ್ತಿರುವ ಪರಿಸರವಾದಿಗಳು, ಕನಿಷ್ಠ ಒಂದು ವರ್ಷದ ಮಟ್ಟಿಗಾದರೂ ಪ್ರವಾಸೋದ್ಯಮವನ್ನು ಬಂದ್ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಅತ್ಯಂತ ಸೂಕ್ಷ್ಮ ಪರಿಸರ ವಲಯವನ್ನು ಹೊಂದಿರುವ ಕೊಡಗು ಜಿಲ್ಲೆಗೆ ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ಮತ್ತು ದೊಡ್ಡ ಮಟ್ಟದ ಪ್ರವಾಸೋದ್ಯಮವನ್ನು ತಡೆದುಕೊಳ್ಳುವ ಶಕ್ತಿ ಇಲ್ಲವೆಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೊಡಗು ಇಂದು ಸೂತಕದ ಛಾಯೆಯಲ್ಲಿದೆ, ಇಂಥ ಪರಿಸ್ಥಿತಿಯಲ್ಲಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಅಗತ್ಯವಿಲ್ಲ. ಪ್ರವಾಸಿಗರು ಬಂದರೆ ಕಳೆದು ಹೋದ ಭೂಮಿಯನ್ನು ನೋಡಲು ಮುಗಿ ಬೀಳುವುದಲ್ಲದೆ, ನೋವಿನ ನಡುವೆಯೂ ಮೋಜು, ಮಸ್ತಿ ಮುಂದುವರಿಯಲಿದೆ ಎಂದು ಪರಿಸರವಾದಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 

ಆದರೆ ಬದಲಾದ ವಾತಾವರಣ, ಹವಾಗುಣ ವೈಪರಿತ್ಯ, ವನ್ಯಜೀವಿಗಳ ದಾಳಿಯ ನಡುವೆ ಕೃಷಿ ಮತ್ತು ಕಾಫಿ ತೋಟದ ನಿರ್ವಹಣೆ ಕಷ್ಟಸಾಧ್ಯವೆಂಬಂತಾಗಿದೆ. ಯಾರಿಗೂ ಆದಾಯ ಕ್ರೋಢೀಕರಣ ಮತ್ತು ಚಲಾವಣೆ ಮಾಡಲು ಸಾಧ್ಯವಾಗದ ಸ್ಥಿತಿ ಉದ್ಭವಿಸಿದೆ. ಪರಿಸರ ಸ್ನೇಹಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯೂ ಅಸಾಧ್ಯವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕೊಡಗಿಗೆ ಪ್ರವಾಸೋದ್ಯಮ ಅನಿವಾರ್ಯ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲದಿಂದ ಕೇಳಿ ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News