ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳನ್ನು ಬಿಡುಗಡೆಗೊಳಿಸಬೇಕು: ತಮಿಳುನಾಡು ಸರಕಾರ

Update: 2018-09-09 16:25 GMT

ಚೆನ್ನೈ, ಸೆ.9: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಎಲ್ಲ ದೋಷಿಗಳನ್ನು ಸಂವಿಧಾನದ 161ನೇ ವಿಧಿಯ ಅಡಿಯಲ್ಲಿ ಬಿಡುಗಡೆ ಮಾಡುವಂತೆ ರಾಜ್ಯಪಾಲರಿಗೆ ಸಲಹೆ ನೀಡಲು ತಮಿಳುನಾಡು ಸಚಿವ ಸಂಪುಟ ರವಿವಾರ ನಿರ್ಧರಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಮುಖ್ಯಮಂತ್ರಿ ಎಡಪಡಿ ಕೆ. ಪಳನಿಸ್ವಾಮಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜಿವ್ ಹಂತಕರನ್ನು ಬಿಡುಗಡೆಗೊಳಿಸುವ ಪ್ರಸ್ತಾಪವನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲು ನಿರ್ಧರಿಸಿರುವುದಾಗಿ ಮೀನುಗಾರಿಕಾ ಸಚಿವ ಡಿ.ಜಯಕುಮಾರ್ ತಿಳಿಸಿದ್ದಾರೆ.

ರಾಜೀವ್ ಹಂತಕರಲ್ಲಿ ಒಬ್ಬನಾದ ಎ.ಜಿ.ಪೇರರಿವೇಲನ್ ಸಲ್ಲಿಸಿರುವ ರಿಟ್ ಅರ್ಜಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಸರಕಾರಕ್ಕೆ ಸೂಚಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಜಯಕುಮಾರ್ ತಿಳಿಸಿದ್ದಾರೆ. ರಾಜೀವ್ ಹತ್ಯೆಯ ದೋಷಿಗಳಾದ ನಳಿನಿ ಶ್ರೀಹರನ್, ಮುರುಗನ್ ಅಲಿಯಾಸ್ ಶ್ರೀಹರನ್, ಪೇರರಿವೇಲನ್ ಅಲಿಯಾಸ್ ಅರಿವು, ರಾಬರ್ಟ್ ಪಾಯಸ್, ರವಿಚಂದ್ರನ್, ಸಂತನ್ ಮತ್ತು ಜಯಕುಮಾರ್ ಕಳೆದ 27 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಸರಕಾರ ನಿರ್ಧಾರದ ಹಿನ್ನೆಲೆಯಲ್ಲಿ ಪೇರರಿವೇಲನ್ ತಾಯಿ ಅರುಪುತಮ್ಮಲ್ ರವಿವಾರ ಸಂಜೆ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಧನ್ಯವಾದ ಸಮರ್ಪಿಸಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅರುಪುತಮ್ಮಲ್, ಈ ವಿಷಯವನ್ನು ರಾಜಕೀಯಗೊಳಿಸದಂತೆ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News