ಜೀವಾವಧಿ ಶಿಕ್ಷೆ ರದ್ದುಕೋರಿ ಸೈನೈಡ್ ಕಿಲ್ಲರ್ ಮೋಹನ್ ಹೈಕೋರ್ಟ್‌ಗೆ ಮೇಲ್ಮನವಿ

Update: 2018-09-09 14:55 GMT

ಬೆಂಗಳೂರು, ಸೆ.8: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದುಕೋರಿ ಸೀರಿಯಲ್ ಕಿಲ್ಲರ್ ಸೈನೈಡ್ ಮೋಹನ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾನೆ.

ಪ್ರಕರಣದಲ್ಲಿ ದಕ್ಷಿಣ ಕನ್ನಡದ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದುಕೋರಿ ಮೋಹನ್ ಸಲ್ಲಿಸಿರುವ ಮೇಲ್ಮನವಿ ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಮೇಲ್ಮನವಿದಾರರು ಪ್ರಕರಣದ ಸಂಬಂಧ ಖುದ್ದು ವಾದ ಮಂಡಿಸಬೇಕಿರುವುದರಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಅವರನ್ನು ಸೆ.17ರಂದು ಬಾಡಿ ವಾರೆಂಟ್ ಮೇಲೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಜೈಲು ಪ್ರಾಧಿಕಾರಕ್ಕೆ ಸೂಚಿಸಿ ಅರ್ಜಿ ವಿಚಾರಣೆ ಮುಂದೂಡಿತು.

ಬಂಟ್ವಾಳದ ಅನಿತಾ ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಾಡುಗೊಳಿಸಿದ್ದ ಹೈಕೋರ್ಟ್, ಬೆಳ್ತಂಗಡಿಯ ಲೀಲಾ ಕೊಲೆ ಪ್ರಕರಣದಲ್ಲಿ ಮೋಹನ್‌ನನ್ನು ಖುಲಾಸೆಗೊಳಿಸಿದೆ. ಆದರೆ, ಸುಳ್ಯದ ಸುನಂದಾ ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ.

ಪ್ರಕರಣವೇನು: 2009ರ ಸೆ.17ರಂದು ಮಡಿಕೇರಿ ಬಸ್ ನಿಲ್ದಾಣದ ಮಹಿಳೆಯರ ಶೌಚಗೃಹದ ಬಳಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಸೈನೈಡ್ ಮೋಹನನ್ನು ಬಂಧಿಸಿದ್ದರು. 2017ರ ಸೆ.13ರಂದು ದಕ್ಷಿಣ ಕನ್ನಡ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಜೀವಾವಧಿ ಶಿಕ್ಷೆ ರದ್ದು ಕೋರಿ ಮೋಹನ್ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News