ದಾವಣಗೆರೆ: ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣಾ ಸಮಾರಂಭ

Update: 2018-09-09 16:06 GMT

ದಾವಣಗೆರೆ,ಸೆ.9: ಸೋಲನ್ನು ಎದುರಿಸುವ ಗುಣವನ್ನು ಮಕ್ಕಳಲ್ಲಿ ಬೆಳೆಸಿ ಎಂದು ಮನೋವೈದ್ಯೆ ಡಾ.ಪ್ರೀತಿ ಪೈ ಶಾನಭಾಗ್ ಪೋಷಕರಿಗೆ ಕಿವಿಮಾತು ಹೇಳಿದರು. 

ಇಲ್ಲಿನ ಹದಡಿ ರಸ್ತೆಯಲ್ಲಿರುವ ಡಾ.ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂದಿರದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಹಮ್ಮಿಕೊಂಡಿದ್ದ ಕನ್ನಡ ಕುವರ-ಕುವರಿ ಪ್ರಶಸ್ತಿ ಮತ್ತು ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಆಗ ಮಾತ್ರ ಮಕ್ಕಳು ಸೋಲಿಗೆ ಹೆದರದೆ ಪರಿಸ್ಥಿತಿಯನ್ನು ನಿಭಾಯಿಸುವ ಯೋಚನೆ ಮಾಡುತ್ತಾರೆ. ಅಂಥಹ ನೈತಿಕ ಶಿಕ್ಷಣವನ್ನು ಪೋಷಕರು ಮಕ್ಕಳಿಗೆ ಕಲಿಸಬೇಕೆಂದು ತಿಳಿಸಿದರು. 

ಯಾವುದೇ ಸೋಲು ಹೊಸ ಅವಕಾಶಗಳಿಗೆ ಮತ್ತೊಂದು ಬಾಗಿಲನ್ನು ತೆಗೆಯುತ್ತದೆ. ಇದನ್ನು ಜೀವನದಲ್ಲಿ ಸೋತ ಯಾರೇ ಆಗಲಿ ಅರ್ಥಮಾಡಿಕೊಳ್ಳಬೇಕು. ಸೋತ ತಕ್ಷಣ ಜೀವನವೇ ಮುಗಿದು ಹೋಯಿತು ಎಂದು ನಕಾರಾತ್ಮಕವಾಗಿ ಯೋಚನೆ ಮಾಡಬಾರದು. ತಮ್ಮ ಸುತ್ತ ಇರುವ ಅವಕಾಶಗಳ ಬಗ್ಗೆ ಕಣ್ಣು ಹಾಯಿಸಿದಾಗ ಹೊಸ ಚಿಂತನೆಗಳು ಮೂಡುತ್ತವೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಕೆ.ಎಚ್.ಮಂಜುನಾಥ್ ವಹಿಸಿದ್ದರು. ವೇದಿಕೆಯಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವ ಅಭಿರಾಮ ಭಾಗವತ್, ಬಾಲ ಸರಸ್ವತಿ ಪ್ರಶಸ್ತಿ ಪುರಸ್ಕೃತೆ ಆಯನಾ ಕೆ.ರಮಣ್, ಗಣೇಶ ಶಣೈ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News