ಏಕಾಏಕಿ ಬಂದ ಪೊಲೀಸರು ನಮ್ಮ ಬೆಡ್ ರೂಂ ಒಳಕ್ಕೂ ನುಗ್ಗಲು ಯತ್ನಿಸಿದರು: ಸಂಜೀವ್ ಭಟ್ ಪತ್ನಿ ಶ್ವೇತಾ

Update: 2018-09-09 16:09 GMT

ಹೊಸದಿಲ್ಲಿ, ಸೆ.9: 22 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ತನ್ನ ಪತಿಯನ್ನು ಬಂಧಿಸಲು ಮನೆಗೆ ಬಂದಿದ್ದ ಪೊಲೀಸರು ನಮ್ಮ ಬೆಡ್ ರೂಂಗೆ ನುಗ್ಗಲು ಯತ್ನಿಸಿದರು ಎಂದು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ರ ಪತ್ನಿ ಶ್ವೇತಾ ಸಂಜೀವ್ ಭಟ್ ತಿಳಿಸಿದ್ದಾರೆ.

ಈ ಬಗ್ಗೆ ಸಂಜೀವ್ ಭಟ್ ಅವರ ಫೇಸ್ಬುಕ್ ಖಾತೆಯಲ್ಲೇ ಪೋಸ್ಟ್ ಹಾಕಿರುವ ಶ್ವೇತಾ ಭಟ್, “ಬೆಳಗ್ಗೆ 8 ಗಂಟೆಯ ಸುಮಾರಿಗೆ ಬಾಗಿಲು ಬಡಿದರು. ನಮ್ಮ ಮನೆಯ ಮುಂದೆ ಇಬ್ಬರು ಪೊಲೀಸರು ನಿಂತಿದ್ದಾರೆ ಎಂದು ತಿಳಿದಾಗ ‘ಅವರು ಪೊಲೀಸ್ ಅಧಿಕಾರಿಗಳು, ಅವರನ್ನು ಮನೆಯೊಳಗೆ ಕುಳಿತುಕೊಳ್ಳುವಂತೆ ಹೇಳಿ. ಚಹಾ ಬೇಕಾ ಎಂದು ಕೇಳಿ’ ಎಂದು ಸಹಾಯಕನಲ್ಲಿ ಸಂಜೀವ್ ಹೇಳಿದ್ದರು. ಆದರೆ ಅಲ್ಲಿ ಇಬ್ಬರು ಪೊಲೀಸರು ಇರದೆ ಪೊಲೀಸರ ತಂಡವೇ ಬಂದಿತ್ತು. ಏಕಾಏಕಿ ಅವರು ನಮ್ಮ ಮನೆಯೊಳಕ್ಕೆ ನುಗ್ಗಿದ್ದರು. ಕೆಲವರು ನಮ್ಮ ಬೆಡ್ ರೂಮ್ ನೊಳಕ್ಕೂ ನುಗ್ಗಲು ಯತ್ನಿಸಿದರು. ಆದರೆ ನನ್ನ ಪುತ್ರ ಅವರನ್ನು ತಡೆದ” ಎಂದು ಶ್ವೇತಾ ಆರೋಪಿಸಿದ್ದಾರೆ.

“ಅವರು ನಮ್ಮ ಖಾಸಗಿತನವನ್ನು ಅತಿಕ್ರಮಿಸಿದ್ದಾರೆ. ನನ್ನ ಪತಿಯನ್ನು ಬಂಧಿಸಿದರು. ನನಗೆ ಕೋಪ ಬರಬೇಕಿತ್ತು ಆದರೆ ನನಗೆ ಅವರನ್ನು ನೋಡಿ ಬೇಸರವಾಯಿತು. ತಮ್ಮ ಮನಸ್ಸು ಒಪ್ಪದ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ ಎಂದು ನನಗೆ ಅರಿವಾಗಿತ್ತು. ನಿರ್ಲಜ್ಜ ಬಾಸ್ ಗಳನ್ನು ಖುಷಿಪಡಿಸಿದರೆ ಸಿಗುವ ಲಾಭ, ಕೆಲಸ ಕಳೆದುಕೊಳ್ಳುವ ಒಬ್ಬರ ಆತಂಕ ನನಗೆ ಕಂಡಿತು. ಖಾಕಿ ಅದರ ಘನತೆಯನ್ನು ಕಳೆದುಕೊಳ್ಳುತ್ತಿದೆ. ಅದರ ಬಣ್ಣವೂ ಮಾಸುತ್ತಿದೆ. ಮೋಸದ ಆದೇಶಗಳು ಖಾಕಿ ತೊಟ್ಟವರನ್ನು ಅದರ ಮೂಲ ತತ್ವಗಳನ್ನು ನಿರ್ಲಕ್ಷಿಸುವಂತೆ ಮಾಡುತ್ತಿದೆ. ನಾನು ಖಾಕಿ ಇಷ್ಟೊಂದು ಬಡವಾಗಿದ್ದನ್ನು ಯಾವತ್ತೂ ನೋಡಿಲ್ಲ” ಎಂದವರು ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News