ನೆರೆಪೀಡಿತ ಕೇರಳ, ಕೊಡಗು ಜನತೆಗೆ ನೆರವಾಗಿ: ಶಾಸಕ ಶಾಮನೂರು ಶಿವಶಂಕರಪ್ಪ ಮನವಿ

Update: 2018-09-09 16:11 GMT

ದಾವಣಗೆರೆ,ಸೆ.9: ಮಳೆಯಿಂದಾಗಿ ಕಷ್ಟದಲ್ಲಿರುವ ಕೇರಳ ಮತ್ತು ಕೊಡಗು ಜನತೆಗೆ ನೆರವಾಗುವಂತೆ ಶಾಸಕ ಶಾಮನೂರು ಶಿವಶಂಕರಪ್ಪ ಮನವಿ ಮಾಡಿದರು. 

ಕೇರಳ ಸಮಾಜಂನಿಂದ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಓಣಂ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಲಕ್ಷಾಂತರ ಜನ ತಮ್ಮ ಆಸ್ತಿ-ಪಾಸ್ತಿ ಕಳೆದುಕೊಂಡಿದ್ದು, ಅಂತಹವರಿಗೆ ಪ್ರತಿಯೊಬ್ಬರು ನೆರವಾಗಬೇಕೆಂದು ಕರೆ ನೀಡಿದ ಶಾಸಕರು ತಾವು ಸಹ ವೈಯಕ್ತಿಕವಾಗಿ ಕೇರಳ ರಾಜ್ಯಕ್ಕೆ 12.50 ಲಕ್ಷರೂ.ಗಳನ್ನು ಹಾಗೂ ಕರ್ನಾಟಕಕ್ಕೆ 12.50 ಲಕ್ಷ ರೂ.ಗಳನ್ನು ನೀಡುವುದರ ಜೊತೆಗೆ ದಾವಣಗೆರೆ ಪಟ್ಟಣ ಸಹಕಾರ ಬ್ಯಾಂಕ್ ಗಳಿಂದ ತಲಾ 50 ಲಕ್ಷ ರೂ.ಗಳನ್ನು ನೀಡಿದ್ದೇವೆ ಎಂದು ತಿಳಿಸಿದರು.

ಓಣಂ ಹಬ್ಬ ಕೇರಳಿಗರಿಗೆ ದೊಡ್ಡ ಹಬ್ಬವಾಗಿದ್ದು, ಪ್ರತಿ ಬಾರಿ ಸಡಗರ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದ ಕೇರಳಿಗರಿಗೆ ಈ ಬಾರಿ ಅಪಾರ ಮಳೆಯಿಂದ ಸಾಕಷ್ಟು ನಷ್ಟವಾಗಿದೆ. ಲಕ್ಷಾಂತರ ಜನತೆ ತಮ್ಮ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸದೇ ಸರಳವಾಗಿ ಆಚರಿಸುತ್ತಿರುವುದು ಶ್ಲಾಘನೀಯವೆಂದರು.

ಮಹಾಪೌರರಾದ ಶ್ರೀಮತಿ ಶೋಭಾ ಪಲ್ಲಾಗಟ್ಟೆ, ಧಾರ್ಮಿಕ ಗುರುಗಳಾದ ಇಬ್ರಾಹಿಂ ಸಖಾಫೆ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ದಿನೇಶ್ ಕೆ.ಶೆಟ್ಟಿ, ಅಧ್ಯಕ್ಷ ಅಬ್ದುಲ್ ರಜಾಕ್, ಇ.ಬಿ.ಬಿಜು, ರಾಜೇಶ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News