ಮಾನವ ಹಕ್ಕು ಕಾರ್ಯಕರ್ತರ ಬಂಧನ: 13 ‘ಮಾವೋವಾದಿ’ ಪತ್ರಗಳು, ಮತ್ತು ಹಲವಾರು ಲೋಪದೋಷಗಳು

Update: 2018-09-09 16:21 GMT

ಹೊಸದಿಲ್ಲಿ,ಸೆ.9: ಮಾವೋವಾದಿಗಳೊಂದಿಗೆ ಸಂಬಂಧ ಹೊಂದಿದ್ದ ಆರೋಪದಲ್ಲಿ ಬಂಧಿತ ಮಾನವ ಹಕ್ಕು ಕಾರ್ಯಕರ್ತರಿಂದ ಪುಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿರುವ ಪತ್ರಗಳು ಮತ್ತು ಇ-ಮೇಲ್‌ಗಳು ಹಲವಾರು ಅಸಮಂಜಸತೆಗಳು ಮತ್ತು ಸುಳ್ಳುಗ್ರಹಿಕೆಗಳಿಂದ ಕೂಡಿವೆ ಎನ್ನುವುದನ್ನು ಆಂಗ್ಲ ಸುದ್ದಿವಾಹಿನಿಯ ವಿಶ್ಲೇಷಣೆಯು ಬಯಲಿಗೆಳೆದಿದೆ.

ಈ ವರ್ಷದ ಜೂನ್ ಮತ್ತು ಆಗಸ್ಟ್‌ನಲ್ಲಿ ಪೊಲೀಸರು ಬಂಧಿಸಿರುವ ವಕೀಲರು ಮತ್ತು ಬುದ್ಧಿಜೀವಿಗಳು ಸೇರಿದಂತೆ ಎಡಪಂಥೀಯ ಚಿಂತನೆಯ 10 ಮಾನವ ಹಕ್ಕು ಕಾರ್ಯಕರ್ತರ ವಿರುದ್ಧ ಸಾಮಾಜಿಕ ಅಶಾಂತಿಗೆ ಸಂಚು,ಭಾರೀ ದಾಳಿಗಳನ್ನು ನಡೆಸಲು ಶಸ್ತ್ರಾಸ್ತ್ರಗಳ ಖರೀದಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸಂಭಾವ್ಯ ಹತ್ಯೆ ಸಂಚು ಇತ್ಯಾದಿ ಆರೋಪ ಹೊರಿಸುವಲ್ಲಿ ಈ ಪತ್ರಗಳು ಪ್ರಮುಖ ಪಾತ್ರ ವಹಿಸಿವೆ.

ಭಾರೀ ಪ್ರಮಾಣದ ಪತ್ರ ವ್ಯವಹಾರ ದಾಖಲೆಗಳನ್ನು ವಶಪಡಿಕೊಂಡಿರುವುದಾಗಿ ಹೇಳಿಕೊಂಡಿರುವ ಪೊಲೀಸರು,ಈ ಪೈಕಿ 13 ಪತ್ರಗಳನ್ನು ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳೆದುರಿಗೆ ಓದಿದ್ದರು.

ಈ ಪತ್ರಗಳನ್ನು ಲ್ಯಾಪ್‌ಟಾಪ್‌ಗಳು ಮತ್ತು ಇತರ ವಿದ್ಯುನ್ಮಾನ ಸಾಧನಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿರುವರಾದರೂ, ಇವು ಯಾವುದೇ ಭೌತಿಕ ಅಥವಾ ಡಿಜಿಟಲ್ ಸಹಿ ಅಥವಾ ಇ-ಮೇಲ್ ಹೆಡರ್‌ಗಳನ್ನು ಒಳಗೊಂಡಿಲ್ಲ ಎನ್ನುವುದು ವಿಷ್ಲೇಷಣೆಯಲ್ಲಿ ಬೆಳಕಿಗೆ ಬಂದಿದೆ. ಇಂತಹ ಮಹತ್ವದ ಪತ್ರಗಳಲ್ಲಿ ಗೂಢಲಿಪಿಯನ್ನೂ ಬಳಸಲಾಗಿಲ್ಲ,ಉದ್ದೇಶಿತ ತಂತ್ರಗಳು ಮತ್ತು ಸಂಚುಗಳನ್ನೂ ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ ಎನ್ನುವುದು ಅಚ್ಚರಿಗೆ ಕಾರಣವಾಗಿದೆ.

ಬಂಧಿತರಲ್ಲಿ ಕೆಲವರು ಕಾಶ್ಮೀರಿ ಪ್ರತ್ಯೇಕತಾವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಮಾಹಿತಿ,ಗ್ರೆನೇಡ್ ಲಾಂಚರ್‌ಗಳ ಖರೀದಿ ಮತ್ತು ಸಾಗಾಣಿಕೆಗೆ ಸಂಬಂಧಿಸಿದ ವಿವರಗಳು, ಮೋದಿ ಹತ್ಯೆಗೆ ಸಂಚಿನ ವಿವರಗಳು ಇತ್ಯಾದಿಗಳು ಪೊಲೀಸರು ಸುದ್ದಿಗೋಷ್ಠಿಯಲ್ಲಿ ಹಾಜರು ಪಡಿಸಿದ್ದ ಪತ್ರಗಳಲ್ಲಿ ಇವೆಯಾದರೂ,ಈ ಎಲ್ಲ ಪತ್ರಗಳಲ್ಲಿ ಉಲ್ಲೇಖಿಸಲಾಗಿರುವ ಅಂಶಗಳು ಪರಸ್ಪರ ತಾಳೆಯಾಗುತ್ತಿಲ್ಲ ಮತ್ತು ಅಸಮಂಜಸತೆಗಳಿಂದ ಕೂಡಿವೆ ಎಂದು ವಿಶ್ಲೇಷಣೆಯು ಹೇಳಿದೆ.

 ಈ ಎಲ್ಲ ಪತ್ರಗಳು ಸಂಪೂರ್ಣಕಲ್ಪಿತವಾಗಿವೆ ಎನ್ನುವುದು ಅತ್ಯಂತ ಸ್ಪಷ್ಟವಾಗಿದೆೆ ಎಂದು ಹೇಳಿರುವ ಇನ್‌ಸ್ಟಿಟ್ಯೂಟ್ ಫಾರ್ ಕಾನ್‌ಫ್ಲಿಕ್ಟ್ ಮ್ಯಾನೇಜ್‌ಮೆಂಟ್‌ನ ಕಾರ್ಯಕಾರಿ ನಿರ್ದೇಶಕ ಅಜಯ ಸಾಹ್ನಿ ಅವರು, ತಥಾಕಥಿತ ನಗರ ಮಾವೋವಾದಿ ಕಾರ್ಯತಂತ್ರವನ್ನು ಇತ್ತೀಚಿಗೆ ಅಂದರೆ 2007ರಲ್ಲಿ ವ್ಯಾಖ್ಯಾನಿಸಲಾಗಿದ್ದು,100 ಪುಟಗಳ ಈ ದಾಖಲೆಯಲ್ಲಿ ರಹಸ್ಯ,ರಹಸ್ಯವಾಗಿ ಮತ್ತು ಗೌಪ್ಯತೆ ಎಂಬ ಶಬ್ದಗಳನ್ನು 96 ಬಾರಿ ಉಲ್ಲೇಖಿಸಲಾಗಿದೆ. ಮೊದಲ ಬಾರಿಗೆ ಅಪರಾಧ ಸಂಚನ್ನು ರೂಪಿಸುವ 15ರ ಹರೆಯದ ಬಾಲಕನೂ ಇಂತಹ ಪತ್ರವನ್ನು ಬರೆಯುವುದಿಲ್ಲ ಎಂದು ಹೇಳಿದ್ದಾರೆ.

ಇನ್ನೊಂದು ಪತ್ರದಲ್ಲಿ ಕ್ರೈಸ್ತ ಮಿಷನರಿಗಳ ಕೆಲಸವನ್ನು ಹೊಗಳಲಾಗಿದೆ. ಈ ಮಿಷನರಿಗಳು ಮಾವೋವಾದಿಗಳ ಸಾಂಪ್ರದಾಯಿಕ ವೈರಿಗಳಾಗಿದ್ದಾರೆ.

ಈ ಪತ್ರಗಳು ತನಗೆ ಅಚ್ಚರಿಯನ್ನುಂಟು ಮಾಡಿಲ್ಲ. ಪೊಲೀಸರು ಪತ್ರಗಳನ್ನು ವಶಪಡಿಸಿಕೊಂಡಿರಬಹುದು,ಅವುಗಳ ಗೂಢಲಿಪಿಯನ್ನು ಭೇದಿಸಿ ಮದ್ರಣ ರೂಪದಲ್ಲಿ ತಂದಿರಬಹುದು. ಆದರೆ ಮಾವೋವಾದಿಗಳು ಮಿಷನರಿಗಳನ್ನು ಬೆಂಬಲಿಸಿರುವುದು ಮಾತ್ರ ಹಾಸ್ಯಾಸ್ಪದವಾಗಿದೆ ಎಂದು ಆಂಧ್ರಪ್ರದೇಶದ ಮಾಜಿ ಡಿಜಿಪಿ ಸ್ವರಣಜಿತ್ ಸೇನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News