ವ್ಯಾಟ್ಸ್ ಆ್ಯಪ್‌ನಲ್ಲಿ ಆದೇಶ ನೀಡಿದ ನ್ಯಾಯಮೂರ್ತಿ: ಇದು ತಮಾಷೆಯೇ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್

Update: 2018-09-09 17:21 GMT

ಹೊಸದಿಲ್ಲಿ, ಸೆ. 10: ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ವ್ಯಾಟ್ಸ್ ಆ್ಯಪ್ ಮೂಲಕ ನಡೆಸಿರುವುದನ್ನು ನೀವು ಎಂದಾದರೂ ಕೇಳಿದ್ದೀರಾ ? ಇದು ವಿಚಿತ್ರವಾದರೂ ಸತ್ಯ !

ಭಾರತದ ನ್ಯಾಯ ವ್ಯವಸ್ಥೆಯಲ್ಲಿ ಇಂತಹ ಜೋಕ್ ಸಂಭವಿಸಲು ಸಾಧ್ಯವೇ ಎಂಬ ಅಚ್ಚರಿಯೊಂದಿಗೆ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಜಾರ್ಖಂಡ್‌ನ ಮಾಜಿ ಸಚಿವ ಹಾಗೂ ಅವರ ಪತ್ನಿ ಆರೋಪಿಗಳಾದ ಪ್ರಕರಣದ ವಿಚಾರಣೆಯನ್ನು ಜಾರ್ಖಂಡ್‌ನ ಹಜಾರಿಬಾಗ್ ಕೆಳ ನ್ಯಾಯಾಲಯ ವ್ಯಾಟ್ಸ್ ಆ್ಯಪ್ ಮೂಲಕ ವಿಚಾರಣೆ ನಡೆಸಿ ಅವರ ವಿರುದ್ಧ ಆರೋಪ ಪಟ್ಟಿ ಸಿದ್ದಪಡಿಸುವಂತೆ ಆದೇಶಿಸಿತ್ತು. 2016ರ ಗಲಭೆ ಪ್ರಕರಣದ ಆರೋಪಿಗಳಾದ ಜಾರ್ಖಂಡ್‌ನ ಮಾಜಿ ಸಚಿವ ಯೋಗೇಂದ್ರ ಸಾವೋ ಹಾಗೂ ಅವರ ಪತ್ನಿ ನಿರ್ಮಲಾ ದೇವಿಗೆ ಕಳೆದ ವರ್ಷ ಉನ್ನತ ನ್ಯಾಯಾಲಯ ಜಾಮೀನು ನೀಡಿತ್ತು.

ಆದರೆ, ಅವರು ಭೋಪಾಲದಿಂದ ತೆರಳಬಾರದು ಹಾಗೂ ನ್ಯಾಯಾಲಯದ ಕಲಾಪಕ್ಕೆ ಹಾಜರಾಗುವುದನ್ನು ಹೊರತುಪಡಿಸಿ ಇತರ ಯಾವುದೇ ಕಾರಣಕ್ಕೂ ಜಾರ್ಖಂಡ್ ಪ್ರವೇಶಿಸಬಾರದು ಎಂದು ನ್ಯಾಯಾಲಯ ಶರತ್ತು ವಿಧಿಸಿತ್ತು.

ತಾವು ಆಕ್ಷೇಪ ವ್ಯಕ್ತಪಡಿಸಿದ ಹೊರತಾಗಿಯೂ ಈ ವರ್ಷ ಎಪ್ರಿಲ್ 19ರಂದು ವ್ಯಾಟ್ಸ್ ಆ್ಯಪ್ ಕರೆ ಮೂಲಕ ವಿಚಾರಣೆ ನಡೆಸಿ ನಮ್ಮ ವಿರುದ್ಧ ಆರೋಪ ಪಟ್ಟಿ ಸಿದ್ದಪಡಿಸಲಾಗಿದೆ ಎಂದು ಇಬ್ಬರು ಆರೋಪಿಗಳು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಈ ಪ್ರತಿಪಾದನೆಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹಾಗೂ ಎಲ್.ಎನ್. ರಾವ್ ಅವರನ್ನು ಒಳಗೊಂಡ ಪೀಠ, ಜಾರ್ಖಂಡ್‌ನಲ್ಲಿ ಏನು ನಡೆಯುತ್ತಿದೆ. ಈ ಪ್ರಕ್ರಿಯೆಗೆ ಅವಕಾಶ ನೀಡಬಾರದು. ನ್ಯಾಯಾಂಗದ ಘನತೆಗೆ ಧಕ್ಕೆ ತರುವುದಕ್ಕೆ ನಾವು ಅವಕಾಶ ನೀಡಲಾರೆವು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News