ಕೊಲ್ಲುವ ಮನುಷ್ಯರ ತಯಾರು ಮಾಡುವ ಸಂದರ್ಭ ಸೃಷ್ಟಿ: ಪರಿಷತ್ ಸದಸ್ಯ ಶ್ರೀಕಂಠೇಗೌಡ

Update: 2018-09-09 17:22 GMT

ಮಂಡ್ಯ, ಸೆ.9: ದೇಶ ಮತ್ತು ವಿಶ್ವ ಶಾಂತಿ, ಐಕ್ಯತೆಗೆ ಧಕ್ಕೆ ತರುವ ಶಕ್ತಿಗಳೇ ಇನ್ನೂ ಮೀರಿ ಕೊಲ್ಲಲಿಕ್ಕೆಂದೇ ಮನುಷ್ಯನನ್ನು ತಯಾರು ಮಾಡುವಂತಹ ಸಂದರ್ಭಗಳು ಸೃಷ್ಟಿಯಾಗುತ್ತಿರುವ ಆತಂಕದ ದಿನಗಳು ಎದುರಾಗುತ್ತಿವೆ ಎಂದು ಅವರು ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತ್ ವಿಕಾಸ್ ಪರಿಷತ್ ಕರ್ನಾಟಕ ಪ್ರಾಂತದ ವತಿಯಿಂದ ನಗರದ ರೈತ ಸಭಾಂಗಣದಲ್ಲಿ ರವಿವಾರ ನಡೆದ ಪ್ರಾಂತಮಟ್ಟದ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತನ್ನು ಕಟ್ಟುವ ಮತ್ತು ಸದೃಢಗೊಳಿಸುವ ಶಕ್ತಿಗಳಿಗೆ ಪರ್ಯಾಯವಾಗಿ ವಿಧ್ವಂಸಕ ಶಕ್ತಿಗಳೇ ವಿಜೃಂಭಿಸುತ್ತಿವೆ. ಇಂತಹ ಸಂದರ್ಭದಲ್ಲಿ ಭಾರತ್ ವಿಕಾಸ್ ಪರಿಷತ್ತು ಎಲ್ಲೋ ಒಂದು ಕಡೆ ಯುವಕರಿಗೆ ಜೀವನ ಮೌಲ್ಯಗಳನ್ನು ಬಿತ್ತುವಂತಹ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ಅವರು ಪ್ರಶಂಸಿಸಿದರು.

ರಾಷ್ಟ್ರದ ಜನತೆ ನೆಮ್ಮದಿಯಾಗಿ ಬದುಕಬೇಕಾದರೆ ಸತ್ಪ್ರಜೆಗಳು ರೂಪುಗೊಳ್ಳಬೇಕು. ಆ ಮೂಲಕ ದೇಶವನ್ನು ಸದೃಢವಾಗಿ ಕಟ್ಟಬೇಕು. ಪಂಚಶೀಲ ತತ್ವದ ಅಡಿಯಲ್ಲಿ ದೇಶ ಕಟ್ಟುವ ಧೀಕ್ಷೆ ತೊಡಬೇಕು ಎಂದು ಅವರು ಕರೆ ನೀಡಿದರು.

ಭಾರತ್ ವಿಕಾಸ್ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಪೋಷಕ ಸಿ.ಎನ್.ಎನ್.ರಾಜು ಮಾತನಾಡಿ, ಯುವಕರನ್ನು ಒಳ್ಳೆಯ ನಾಯಕರನ್ನಾಗಿ ತಯಾರು ಮಾಡುವಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಮದ್ದೂರಿನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಭಾರತ್ ವಿಕಾಸ್ ಪರಿಷತ್ತಿನ ಭವನ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಪರಿಷತ್‍ನ ರಾಷ್ಟ್ರೀಯ ಅಧ್ಯಕ್ಷ ಎನ್. ದೌಲತ್‍ರಾವ್, ದಕ್ಷಿಣ ರಾಷ್ಟೀಯ ಉಪಾಧ್ಯಕ್ಷ ರಮೇಶ್‍ಚಂದ್ ಜೈನ್, ಪ್ರಾಂತ ಸಲಹೆಗಾರ ಕೆ.ಎನ್.ರಾಮರಾಜೇ ಅರಸು, ಪ್ರಾಂತ ಅಧ್ಯಕ್ಷ ಡಿ.ಪಿ.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶ್ರೀನಿವಾಸ್, ಪ್ರಾಂತ ಸಂಚಾಲಕ ಪನ್ನಗ ಶಯನಂ, ಕೋಶಾಧ್ಯಕ್ಷ ಕೆ.ಎನ್. ದ್ವಾರಕನಾಥ್, ಪ್ರಾಂತ ಉಪಾಧ್ಯಕ್ಷ ಬಾಪುಗೌಡ ಪಾಟೀಲ್, ಬಿ.ಕೆ. ತಿಪ್ಪೇಸ್ವಾಮಿ, ಪ್ರಾಂತ ಜಂಟಿ ಕಾರ್ಯದರ್ಶಿ ಚನ್ನಸಂದ್ರ ಮಹದೇವು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News