ಮೋದಿ ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ: ಸಾಹಿತಿ ದೇವನೂರು ಮಹದೇವ

Update: 2018-09-09 17:45 GMT

ಮೈಸೂರು,ಸೆ.9: ಭೂ ಸ್ವಾಧೀನ ವಿರೋಧಿಸಿ ತಮಿಳುನಾಡಿನ ತಿರುವಣ್ಣೂರ್ ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡಲು ತೆರಳುತ್ತಿದ್ದ ಸ್ವರಾಜ್ ಇಂಡಿಯಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಯೋಗೇಂದ್ರ ಯಾದವ್ ಮತ್ತು ಕಾರ್ಯಕರ್ತರನ್ನು ಬಂಧಿಸಿರುವ ತಮಿಳುನಾಡಿನ ಪೊಲೀಸರ ವಿರುದ್ಧ ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪುತ್ಥಳಿ ಮುಂಭಾಗ ರವಿವಾರ ಜಮಾವಣೆಗೊಂಡ ರೈತಸಂಘ, ಹಸಿರು ಸೇನೆ ಮತ್ತು ಸ್ವರಾಜ್ ಇಂಡಿಯಾ ಕಾರ್ಯಕರ್ತರು ತಮಿಳುನಾಡು ಪೊಲೀಸರ ಕ್ರಮವನ್ನು ಖಂಡಿಸಿ ನಾನಾ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಹಿರಿಯ ಸಾಹಿತಿ ದೇವನೂರು ಮಹದೇವ, 'ದೇಶದಲ್ಲಿ ಅರಾಜಕತೆ ಉಂಟಾಗುತ್ತಿದೆ. ದಿನೇ ದಿನೇ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದೆ. ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕಳ್ಳರು, ಕೊಲೆಗಾರರು ನೇರವಾಗಿ ಬಂದಲ್ಲಿ ಹೋರಾಟ ಮಾಡಬಹುದು. ಆದರೆ, ಮುಸುಕುದಾರಿಗಳಾಗಿ ಬಂದಲ್ಲಿ ಹೋರಾಟ ಹೇಗೆ ಸಾಧ್ಯ. ಇದೀಗ ಕೇಂದ್ರ ಸರ್ಕಾರ ಮುಸುಕುದಾರಿಗಳಂತೆ ನಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಹೇರಿದ್ದ ವೇಳೆ ಸಾಕಷ್ಟು ಚಳುವಳಿಗಳು ನಡೆದಿದ್ದವು. ಆದರೆ, ಇಂದು ಅದಕ್ಕಿಂತ ಭಿನ್ನವಾದ ಪರಿಸ್ಥಿತಿ ಇದೆ. ಹೀಗಾಗಿ ಚಳುವಳಿಗಳು ಮತ್ತೆ ಆರಂಭವಾಗಬೇಕು. ಚೆನ್ನೈ-ಸೇಲಂ ರಸ್ತೆಗೆ ಪರ್ಯಾಯವಾಗಿ ಬೇರೆ ರಸ್ತೆ ಇದೆ. ಹೀಗಿದ್ದರೂ ಕೂಡ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ. ಯೋಜನೆಯ ಮೂಲಕ ಫಲವತ್ತಾದ ಭೂಮಿ, ಮರಗಿಡಗಳನ್ನು ನಾಶ ಮಾಡಲು ಹೊರಟಿದೆ. ಇದರಿಂದಾಗಿ ಸಾಕಷ್ಟು ಹಣ ಕಮಿಷನ್ ಹೆಸರಿನಲ್ಲಿ ಲೂಟಿಯಾಗಲಿದೆ ಎಂದು ಹೇಳಿದರು.

ಮರಗಳ ಹನನ, ಭೂಮಿಯ ನಾಶದಿಂದಾಗಿ ಈಗಾಲೇ ಕೇರಳ ಹಾಗೂ ಕೊಡಗಿನಲ್ಲಿ ಸಾಕಷ್ಟು ಹಿಂಸೆ, ನಷ್ಟ ಅನುಭವಿಸಿದ್ದೇವೆ. ಇದರಿಂದಲಾದರೂ ನಾವು ಪಾಠ ಕಲಿಯಬೇಕಿದೆ. ಇಂತಹ ಯೋಜನೆಗಳ ಮೂಲಕ ಕಾಡು ನಾಶವಾದಲ್ಲಿ ಮಾನವನ ವಿನಾಶ ಕೂಡ ಖಂಡಿತ ಎಂದು ಎಚ್ಚರಿಸಿದರು.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿ, ಇಂತಹ ಯೋಜನೆಗಳು ರೂಪುಗೊಳ್ಳುವುದರ ಹಿಂದೆ ಕಾರ್ಪೋರೇಟ್‍ನಂತಹ ಕಾಣದ ಕೈಗಳ ಕೈವಾಡವಿದೆ. ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಭೂ ಸ್ವಾಧೀನ ಮಾಡಿಕೊಂಡ ನಂತರ ಅಲ್ಲಿ ಕಾರ್ಪೋರೇಟ್ ಸಂಸ್ತೆಗಳು ರೆಸಾರ್ಟ್, ಮಾಲ್ ಮುಂತಾದ ಬೃಹತ್ ಕಟ್ಟಡಗಳ ನಿರ್ಮಾಣ ಮಾಡುತ್ತವೆ. ಹೀಗಾಗಿ ಇಂತಹ ಯೋಜನೆಗಳ ಅವಶ್ಯಕತೆಯಿಲ್ಲ. ಇದು ಕೇವಲ ಭೂ ಕಬಳಿಕೆಯ ತಂತ್ರ ಎಂದು ಆರೋಪಿಸಿದರು.

ತಮಿಳುನಾಡು ರೈತರು ಹೋರಾಟ ಮಾಡುತ್ತಿದ್ದಾರೆ. ಅಲ್ಲಿ ಯಾವುದೇ ಅರಾಜಕತೆ ಇರಲಿಲ್ಲ. ಸ್ವರಜ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಯೋಗೇಂದ್ರ ಯಾದವ್, ಬಿಹಾರದ ಲಿಂಗರಾಜು, ಕೇರಳದ ಬಾಲಕೃಷ್ಣ ಹಾಗೂ ಇನ್ನಿತರರು ದೇಶದ ನಾಗರೀಕರಾಗಿ ಪ್ರತಿಭಟನೆಗೆ ಬೆಂಬಲ ಸೂಚಿಸಲು ತೆರಳುತ್ತಿದ್ದರು. ಅವರನ್ನು ಪೊಲೀಸರು ಏಕಾಏಕಿ ಬಂಧಿಸಿರುವುದು ಸರಿಯಲ್ಲ ಎಂದು ಘಟನೆಯನ್ನು ಖಂಡಿಸಿದರು.

ಹೊಸಕೋಟೆ ಬಸವರಾಜ್, ಮರಂಕಯ್ಯ, ಮಲ್ಕಳ್ಳಿ ಮಹೇಶ್, ವಿಜೇಂದ್ರ, ಬಸವರಾಜ್ ಒಡ್ಡರಗುಡಿ, ಚಾಮಳ್ಳಿ ಮಹದೇವ್, ಪ್ರಭಾಕರ್, ಸ್ವರಾಜ್ ಇಂಡಿಯಾದ ಬಿ.ಕರುಣಾಕರ್, ಉಗ್ರನರಸಿಂಹೇಗೌಡ, ಮುಖಂಡರಾದ ಚಿನ್ನಸ್ವಾಮಿ ವಡ್ಡಗೆರೆ, ಸಿದ್ದನಾಯಕ, ಲಿಂಗರಾಜು, ನಾಗರಾಜು, ಕುಮಾರ್, ಸುದೀಂದ್ರ, ಬಾಲರಾಜ್, ಚಂದ್ರಶೇಖರ್, ಕೆಂಪೇಗೌಡ, ಜೋಗನಾಯಕರು, ಗುರುಲಿಂಗೇಗೌಡ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News