2017-18ರ ನಡುವೆ 75 ರೈಲ್ವೆ ಅಪಘಾತದಲ್ಲಿ 40 ಸಾವು

Update: 2018-09-09 18:00 GMT

ಹೊಸದಿಲ್ಲಿ, ಸೆ. 10: ರೈಲ್ವೆಯಲ್ಲಿ 2017 ಸೆಪ್ಟಂಬರ್ ಹಾಗೂ 2018 ಸೆಪ್ಟಂಬರ್ ನಡುವೆ ಸಂಭವಿಸಿದ 75 ಅಪಘಾತಗಳಲ್ಲಿ 40 ಸಾವು ಸಂಭವಿಸಿರುವುದು ದಾಖಲಾಗಿದೆ. ಕಳೆದ ಐದು ವರ್ಷಗಳಲ್ಲಿ ಈ 12 ತಿಂಗಳು ಅತ್ಯುತ್ತಮ ಸುರಕ್ಷಾ ಅಂಕಿ-ಅಂಶ ಎಂದು ದಾಖಲಾಗಿದೆ ಎಂದು ಅಧಿಕೃತ ದತ್ತಾಂಶವನ್ನು ಉಲ್ಲೇಖಿಸಿ ಸಚಿವಾಲಯ ತಿಳಿಸಿದೆ.

2016 ಸೆಪ್ಟಂಬರ್ ಹಾಗೂ 2017 ಆಗಸ್ಟ್ ನಡುವೆ 80 ರೈಲು ಅಪಘಾತಗಳು ಸಂಭವಿಸಿವೆ. 249 ಸಾವು ಸಂಭವಿಸಿದೆ. 2016 ನವೆಂಬರ್‌ನಲ್ಲಿ ಕಾನ್ಪುರದಲ್ಲಿ ಇಂದೋರ್-ಪಾಟ್ನಾ ಎಕ್ಸ್‌ಪ್ರೆಸ್ ಹಳಿತಪ್ಪಿ 150 ಪ್ರಯಾಣಿಕರು ಮೃತಪಟ್ಟಿದ್ದರು. 2017 ಹಾಗೂ 2018ರ ನಡುವಿನ ಅವಧಿಯಲ್ಲಿ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 40 ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಅವಧಿಯಲ್ಲಿ ಎರಡು ಪ್ರಮುಖ ಅಪಘಾತಗಳು ಸಂಭವಿಸಿವೆ. 2017 ಆಗಸ್ಟ್‌ನಲ್ಲಿ ಉತ್ಕಲ್ ಎಕ್ಸ್‌ಪ್ರೆಸ್ ಅಪಘಾತ ಸಂಭವಿಸಿ 20 ಪ್ರಯಾಣಿಕರು ಮೃತಪಟ್ಟಿದ್ದರು. ಇದೇ ವರ್ಷ ಎಪ್ರಿಲ್‌ನಲ್ಲಿ ಉತ್ತರಪ್ರದೇಶದಲ್ಲಿ ರೈಲೊಂದು ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ 13 ಮಕ್ಕಳು ಸಾವನ್ನಪ್ಪಿದ್ದರು.

ಇದೇ ರೀತಿ 2013 ಸೆಪ್ಟಂಬರ್ ಹಾಗೂ 2014 ಆಗಸ್ಟ್ ನಡುವಿನ ಅವಧಿಯಲ್ಲಿ 139 ಅಪಘಾತಗಳಲ್ಲಿ 275 ಜನರು ಮೃತಪಟ್ಟಿದ್ದರು. 2014-2015ರಲ್ಲಿ 108 ಅಪಘಾತಗಳಲ್ಲಿ 196 ಜನರು ಮೃತಪಟ್ಟಿದ್ದರು ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News