ಚಿಕ್ಕಮಗಳೂರು: ಮೈನವಿರೇಳಿಸಿದ ಕೆಟಿಎಂ ಬೈಕ್‍ ಸ್ಟಂಟ್ ಪ್ರದರ್ಶನ

Update: 2018-09-09 18:06 GMT

ಚಿಕ್ಕಮಗಳೂರು, ಸೆ.9: ಮುಂಚೂಣಿಯ ರೇಸಿಂಗ್ ಬೈಕುಗಳ ಬ್ರಾಂಡ್ ಕೆಟಿಎಂ ವತಿಯಿಂದ ನಗರದಲ್ಲಿ ಶನಿವಾರ ರೋಮಾಂಚಕ ಬೈಕ್ ಸಾಹಸ ಪ್ರದರ್ಶನವನ್ನು ಆಯೋಜಿಸಿತ್ತು. ಚೆನ್ನೈಯಿಂದ ಆಗಮಿಸಿದ್ದ ವೃತ್ತಿಪರ ಸಾಹಸಿ ಬೈಕ್ ಚಾಲಕರು ಮೈನವಿರೇಳಿಸುವ ಬೈಕ್ ಸಾಹಸ ಮತ್ತು ಟ್ರಿಕ್‍ಗಳು ಬೈಕ್‍ಸ್ಟಂಟ್ ಪ್ರಿಯರನ್ನು ರೋಮಾಂಚನಗೊಳಿಸುವಲ್ಲಿ ಯಶಸ್ವಿಯಾದವು.

ನಗರದಟೌನ್ ಮಹಿಳಾ ಸಮಾಜ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಈ ಸಾಹಸ ಪ್ರದರ್ಶನಕ್ಕೆ ನೂರಾರು ಜನರು ಸಾಕ್ಷಿಯಾದರು. ಪ್ರೇಕ್ಷಕರು ಉಸಿರು ಬಿಗಿಹಿಡಿಯುವಂತೆ ಕೆಟಿಎಂ ಡ್ಯೂಕ್ ಬೈಕ್‍ಗಳಲ್ಲಿ ಚಾಲಕರು ಸಾಹಸಗಳನ್ನು ಸಾದರಪಡಿಸಿದರು. ಕೆಟಿಎಂ ಬೈಕ್ ಸಾಹಸ ನೋಡಲು ಸಾರ್ವಜನಿಕರಿಗೆ ಉಚಿತ ಪ್ರವೇಶವಿತ್ತು.

ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಬಜಾಜ್ ಆಟೊ ಲಿಮಿಟೆಡ್‍ ಪ್ರೊಬೈಕಿಂಗ್ ವಿಭಾಗದ ಅಧ್ಯಕ್ಷ ಅಮಿತ್ ನಂದಿ, ಕೆಟಿಎಂ ಬ್ರಾಂಡ್ ಅಧಿಕ ಸಾಮರ್ಥ್ಯದ ರೇಸಿಂಗ್ ಬೈಕ್‍ಗಳಿಗೆ ಹೆಸರಾಗಿದೆ. ಕೆಟಿಎಂ ಬೈಕ್‍ಗಳು ಚಾಲಕರಿಗೆ ಯಾವ ರೀತಿಯ ರೋಮಾಂಚಕ ಅನುಭವ ನೀಡಬಹುದು ಎನ್ನುವುದನ್ನು ಇಂಥ ಪ್ರದರ್ಶನದ ಮೂಲಕ ಸಾಬೀತುಪಡಿಸಲಾಗುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ವೃತ್ತಿಪರ ಸಾಹಸಿ ಸವಾರರು ಈ ಪ್ರದರ್ಶನ ನೀಡುತ್ತಿದ್ದಾರೆ ಎಂದರು.

ಸಂಸ್ಥೆ ವತಿಯಿಂದ ರಾಜ್ಯದ ಗೋಕಾಕ, ಹೊಸಪೇಟೆ, ಮಂಗಳೂರು, ಉಡುಪಿ, ವಿಜಯಪುರ, ಕೋಲಾರ ಹಾಗೂ ಚೆನ್ನೈ, ಇಂದೋರ್, ಕಂಚಿಪುರ, ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕೆಟಿಎಂ ಸಾಹಸ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಎಲ್ಲೆಡೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News