ಚಿಕ್ಕಮಗಳೂರು: ಮನಸೂರೆಗೊಂಡ ಸುಗ್ಗಿ ಕುಣಿತ ಸ್ಪರ್ಧೆ

Update: 2018-09-09 18:06 GMT

ಚಿಕ್ಕಮಗಳೂರು, ಸೆ.9: ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಿನ ಮಳಲೂರಿನಲ್ಲಿ ರವಿವಾರ ನಡೆದ ಸುಗ್ಗಿ ಕುಣಿತ ಸ್ಫರ್ಧೆ ಗ್ರಾಮದಲ್ಲಿ ಗ್ರಾಮಸ್ಥರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಸ್ಪರ್ಧೆಗೆ ಚಾಲನೆ ನೀಡಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು, ಸ್ವತಃ ಗ್ರಾಮೀಣ ವಾದ್ಯವನ್ನು ನುಡಿಸುವುದರ ಜೊತೆಗೆ ಹಳ್ಳಿ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಗ್ರಾಮಸ್ಥರೊಂದಿಗೆ ಕುಣಿದು ಕುಪ್ಪಳಿಸುವ ಮೂಲಕ ಕಲಾವಿದರನ್ನು ಹುರಿದುಂಬಿಸಿದರು.

ವೇದಿಕೆ ಕಾರ್ಯಕ್ರಮ ಮುಗಿಯುವವರೆಗೂ ಖಾಲಿ ಇದ್ದ ಮುಂಭಾಗದ ಬಯಲಿನಲ್ಲಿ ಗ್ರಾಮೀಣ ವಾದ್ಯಗಳು ಮೊಳಗಿದವು. ಸುಗ್ಗಿ ಕುಣಿತ ಆರಂಭಗೊಳ್ಳುತ್ತಿದ್ದಂತೆ ಜನಜಾತ್ರೆಯೇ ನೆರೆಯಿತು. ಮಹಿಳೆಯರು, ಮಕ್ಕಳು ಮತ್ತು ವೃದ್ಧರೂ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಗಣ್ಯರು ಬಿರುಬಿಸಿಲನ್ನೂ ಲೆಕ್ಕಿಸದೇ ಕುಣಿದು ಕುಪ್ಪಳಿಸಿದರು. ಗ್ರಾಮೀಣ ವಾದ್ಯಗಳ ನಿನಾದ ತಾರಕಕ್ಕೇರುತ್ತಿದಂತೆ ಮಹಿಳೆಯರು ಪುರುಷರಿಗಿಂತ ನಾವೇನು ಕಮ್ಮಿ ಎಂಬಂತೆ ಹೆಜ್ಜೆ ಹಾಕುವ ಮೂಲಕ ನೋಡುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು. ಸುಗ್ಗಿ ಕುಣಿತದಿಂದಾಗಿ ಇಡೀ ಗ್ರಾಮದಲ್ಲಿ ಸುಗ್ಗಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ಗ್ರಾಮೀಣ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಜಾನಪದ ಸಂಸ್ಕೃತಿಯನ್ನು ಯಾವುದೇ ಕಾರಣಕ್ಕೂ ನಶಿಸಿ ಹೋಗಲು ಬಿಡಬಾರದು. ಅದನ್ನು ನಮ್ಮ ಬದುಕಿನಲ್ಲಿ ನಾವು ಮತ್ತೆ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಜಾನಪದ ಪರಿಷತ್‍ನ ರಾಜ್ಯಾಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ಜಾನಪದ ನಮ್ಮ ಸಂಸ್ಕೃತಿಯ ಮೂಲ ಬೇರಾಗಿದೆ. ಅದನ್ನು ಗ್ರಾಮೀಣ ಜನ ಪೋಷಿಸಿ ಬೆಳೆಸಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್, ಆಧುನಿಕತೆಯ ಭರದಲ್ಲಿ ಕಣ್ಮರೆಯಾಗುತ್ತಿರುವ ಜಾನಪದವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗ್ರಾಮದ ಮುಖಂಡರಾದ ಭೈರೇಗೌಡ, ತಿಮ್ಮಪ್ಪ, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಸಂತೋಷ್, ಸದಸ್ಯ ಪ್ರಸನ್ನ ಕುಮಾರ್, ರೈತ ಸಂಘದ ಮುಖಂಡ ಕೆ.ಕೆ.ಕೃಷ್ಣೇಗೌಡ, ಎಂ.ಬಿ.ರುದ್ರೇಗೌಡ, ಆಶಾ ಕಿರಣ ಅಂಧಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಉಪಸ್ಥಿತರಿದ್ದರು. ಡಿ.ಎಂ.ಮಂಜುನಾಥ ಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು, ಕಂಬಿಹಳ್ಳಿ ಕುಮಾರ್ ಸ್ವಾಗತಿಸಿದರು, ಸೋಮಶೇಖರ್ ವಂದಿಸಿದರು.

ಮಳಲೂರು ಏತನೀರಾವರಿ ಯೋಜನೆಯ ಕಾಮಗಾರಿಯನ್ನು ನಾನೇ ಆರಂಭಿಸಿದ್ದು, ಅದನ್ನು ನಾನೇ ಪೂರ್ಣಗೊಳಿಸುತ್ತೇನೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು. ತಾಲೂಕಿನ ಮಳಲೂರಿನಲ್ಲಿ ಸುಗ್ಗಿ ಕುಣಿತ ಸ್ಪರ್ಧೆಯ ವೇಳೆ ಗ್ರಾಮಸ್ಥರ ಮನವಿಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ 6 ಕೋಟಿ ಹಣವನ್ನು ಮಂಜೂರು ಮಾಡಿಸಿ ಕಾಮಗಾರಿಯನ್ನು ಪ್ರಾರಂಭಿಸಿದ್ದೆ. ನಂತರದ ದಿನಗಳಲ್ಲಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎಂದ ಅವರು, ಈಗ ನಾನು ಮತ್ತೆ ಶಾಸಕನಾಗಿದ್ದು, ಯೋಜನೆಯ ಕುರಿತು ಜಿಲ್ಲಾಧಿಕಾರಿ ಮತ್ತು ರಾಜ್ಯ ಸರಕಾರರದೊಂದಿಗೆ ಚರ್ಚಿಸಿ ಕಾಮಗಾರಿಯನ್ನು ಮತ್ತೆ ಕೈಗೆತ್ತಿಕೊಳ್ಳುತ್ತೇನೆ, ನನ್ನ ಅವಧಿಯಲ್ಲೇ ಅದನ್ನು ಪೂರ್ಣಗೊಳಿಸುತ್ತೇನೆ.ಆದರೆ ಸ್ಥಳೀಯ ಗ್ರಾಮಸ್ಥರೆಲ್ಲರೂ ಒಂದಾಗಿ ಸಭೆ ಸೇರಿ ಚರ್ಚಿಸಿ ಯೋಜನೆಯ ಬಗ್ಗೆ ಒಮ್ಮತದ ಅಭಿಪ್ರಾಯಕ್ಕೆ ಬರಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News