ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಡಿಕೆಶಿ ರಹಸ್ಯ ಮಾತುಕತೆ ?

Update: 2018-09-09 18:19 GMT

ಮಂಡ್ಯ, ಸೆ.9: ಐಟಿ ದಾಳಿಗೆ ಸಂಬಂಧಿಸಿ ಇಡಿ (ಜಾರಿ ನಿರ್ದೇಶನಾಲಯ)ಯಿಂದ ಬಂಧನ ಭೀತಿ ಎದುರಿಸುತ್ತಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ರವಿವಾರ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರೊಂದಿಗೆ ಗೌಪ್ಯ ಮಾತುಕತೆ ನಡೆಸಿದರೆನ್ನಲಾಗಿದೆ.

ಅಮವಾಸ್ಯೆ ಪೂಜೆ ಹಿನ್ನೆಲೆಯಲ್ಲಿ ಮಠದಲ್ಲೇ ಇದ್ದ ಶ್ರೀಗಳನ್ನು ಖಾಸಗಿ ವಾಹನದಲ್ಲಿ ಆಗಮಿಸಿ ಭೇಟಿ ಮಾಡಿದ ಶಿವಕುಮಾರ್, ಸುಮಾರು ಅರ್ಧ ತಾಸು ಮಾತುಕತೆ ನಡೆಸಿ ಸಲಹೆ ಪಡೆದರು ಎಂದು ತಿಳಿದು ಬಂದಿದೆ.

ನಾಥಪರಂಪರೆಯ ಚುಂಚನಗಿರಿ ಮಠ ಹಾಗೂ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಮಠಕ್ಕೂ ಸಂಬಂಧವಿದ್ದು, ಈ ಹಿನ್ನೆಲೆಯಲ್ಲಿ ಶಿವಕುಮಾರ್ ಶ್ರೀಗಳ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. ಈ ಹಿಂದೆ ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆದ ಸಂದರ್ಭದಲ್ಲಿ ಚುಂಚನಗಿರಿ ಶ್ರೀಗಳು ಮಧ್ಯೆಪ್ರವೇಶ ಮಾಡಿ ಶಿವಕುಮಾರ್ ಬಂಧನವಾಗದಂತೆ ನೋಡಿಕೊಂಡಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಡಿಕೆಶಿಯ ಶ್ರೀಗಳ ಭೇಟಿ ಮಹತ್ವ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News