ಕೇರಳ: ಪರಿಹಾರ ಕಾರ್ಯದಲ್ಲಿ ಕೈಜೋಡಿಸಿದ ಇಂಗ್ಲೆಂಡ್ ನ ಸರ್ರೆ ವಿವಿ ವಿದ್ಯಾರ್ಥಿಗಳು

Update: 2018-09-09 18:48 GMT

ತಿರುವನಂತಪುರಂ, ಸೆ. 9: ಕೇರಳವನ್ನು ಕಂಗೆಡಿಸಿದ ಶತಮಾನದ ಭೀಕರ ಮಳೆ ಮತ್ತು ಪ್ರವಾಹವನ್ನು ಆ ರಾಜ್ಯದ ಜನತೆ ಸ್ಥೈರ್ಯದಿಂದ ಎದುರಿಸಿ ಮತ್ತೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ವರದಿಗಳು ಈಗಾಗಲೇ ಬಂದಿವೆ.

ರಾಜ್ಯ ಸರಕಾರದಿಂದ ಮುಖ್ಯಮಂತ್ರ ಸಹಿತ ಸಚಿವರು, ಹಿರಿಯ – ಕಿರಿಯ ಅಧಿಕಾರಿಗಳು, ಸಂಘಸಂಸ್ಥೆಗಳು, ಉದ್ಯಮಿಗಳು, ಪತ್ರಕರ್ತರು ಎಲ್ಲರೂ ಪ್ರವಾಹದಿಂದ ಕೊಚ್ಚಿಕೊಂಡು ಹೋಗಿರುವ ತಮ್ಮ ರಾಜ್ಯವನ್ನು ಮತ್ತೆ ಎಂದಿನಂತೆ ಮಾಡಲು ಶತ ಪ್ರಯತ್ನ ಪಡುತ್ತಿರುವ ಬಗ್ಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ಕೇಳಿ ಬಂದಿದೆ.

ಈಗ ಕೇರಳ ಮೂಲದ ಸದ್ಯ ವಿದೇಶದಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳ ಸರದಿ. ಇಂಗ್ಲೆಂಡ್ ನ ಪ್ರತಿಷ್ಠಿತ ಸರ್ರೆ ವಿವಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಅಹ್ಮದ್ ಝಾಕ್ ಫೈಝಲ್ ತನ್ನ ಸಹಪಾಠಿಗಳೊಂದಿಗೆ ಕೇರಳಕ್ಕೆ ಬಂದು ಪರಿಹಾರ ಕಾರ್ಯದಲ್ಲಿ ಕೈ ಜೋಡಿಸಿದ್ದಾನೆ.

ಚಾಲಕ್ಕುಡಿ ಸಮೀಪದ ಅನುಗ್ರಹ ಸದನ್ ಎಂಬ ಅನಾಥ ಮಕ್ಕಳ ಸಂಸ್ಥೆಯೊಂದನ್ನು ಝಾಕ್ ಮತ್ತು ಆತನ ಮಿತ್ರರು ಜೊತೆ ಸೇರಿ ಸ್ವಚ್ಛಗೊಳಿಸಿಕೊಟ್ಟರು.

ತನ್ನ ತಂದೆ ಹಾಗು ಕೇರಳ ಮೂಲದ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಫೈಝಲ್ ಕೊಟ್ಟಿಕೊಲ್ಲನ್ ಮತ್ತು ತಾಯಿ ಶಬಾನಾ ಫೈಝಲ್ ನಡೆಸುತ್ತಿರುವ ಖ್ಯಾತ ಸಮಾಜ ಸೇವಾ ಸಂಸ್ಥೆ ಫೈಝಲ್ ಶಬಾನಾ ಫೌಂಡೇಶನ್ ನ ನೇತೃತ್ವದಲ್ಲಿ ಝಾಕ್ ತಮ್ಮ ಮಿತ್ರರೊಂದಿಗೆ ಈ ಸೇವಾ ಕಾರ್ಯ ನಡೆಸುತ್ತಿದ್ದಾರೆ.

ಝಾಕ್ ಈಗ ಸರ್ರೆ ವಿವಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿ.

ಇದೇ ಸಂದರ್ಭದಲ್ಲಿ ಝಾಕ್ ಅವರ ಪೋಷಕರ ಪ್ರತಿಷ್ಠಿತ ಕಂಪೆನಿ ‘ಕೆಫ್’ನ ಉದ್ಯೋಗಿಗಳು ನೀಡಿರುವ ಬಟ್ಟೆ ಬರೆ, ಆಹಾರ ಸಾಮಗ್ರಿ, ಆಟಿಕೆಗಳು ಹಾಗು ಔಷಧಿಗಳನ್ನು ವಿತರಿಸಲಾಯಿತು.

ಅಹ್ಮದ್ ಝಾಕ್ ಫೈಝಲ್ ಕೇರಳದ ಕ್ಯಾಲಿಕಟ್ ನ ಪಿ.ಕೆ. ಅಹ್ಮದ್ ಮತ್ತು ಮಂಗಳೂರಿನ ತುಂಬೆಯ ಬಿ. ಅಹ್ಮದ್ ಹಾಜಿ ಮೊಹಿಯುದ್ದೀನ್ ಅವರ ಮೊಮ್ಮಗ.

ಫೈಝಲ್ ಮತ್ತು ಶಬಾನಾ ನೇತೃತ್ವದ ‘ಕೆಫ್’ ವಿಶ್ವದ ಪ್ರಖ್ಯಾತ ಪ್ರಿಕಾಸ್ಟ್ ನಿರ್ಮಾಣ ಕಂಪೆನಿಗಳಲ್ಲಿ ಒಂದು. ಈ ಕಂಪೆನಿಯ ವಿಶ್ವದಲ್ಲೇ ಅತ್ಯಂತ ದೊಡ್ಡ ಘಟಕ ಬೆಂಗಳೂರು ಸಮೀಪದ ಕೃಷ್ಣಗಿರಿಯಲ್ಲಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News