ಚಿಕ್ಕಮಗಳೂರು: ಭಾರತ್ ಬಂದ್‍ಗೆ ಜಿಲ್ಲಾದ್ಯಂತ ವ್ಯಾಪಕ ಬೆಂಬಲ

Update: 2018-09-10 12:29 GMT

ಚಿಕ್ಕಮಗಳೂರು, ಸೆ.10: ಪೆಟ್ರೋಲ್-ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಜಿಲ್ಲಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ.

ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ರಸ್ತೆಗಿಳಿಯಲಿಲ್ಲ. ಕೆಲವೆಡೆ ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಪ್ರತಿಭಟನಾಕಾರರು ಅಂಗಡಿ ಮಾಲಕರ ಮನವೊಲಿಸಿ ಮುಚ್ಚಿಸಿದರು. ಪೆಟ್ರೋಲ್ ಬಂಕ್‍ಗಳು, ಚಲನಚಿತ್ರ ಮಂದಿರಗಳು ಬಂದ್ ಬೆಂಬಲಿಸಿ ಸ್ವಯಂಪ್ರೇರಿತವಾಗಿ ಮುಚ್ಚಲಾಗಿತ್ತು.

ನಗರದಲ್ಲಿಯೂ ಬಂದ್‍ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ನಗರದ ಮುಖ್ಯರಸ್ತೆಗಳಲ್ಲಿ ಅಂಗಟಿ ಮುಂಗಟ್ಟುಗಳು, ಹೊಟೇಲ್‍ಗಳು, ಪೆಟ್ರೋಲ್ ಬಂಕ್‍ಗಳನ್ನು ಮುಚ್ಚಲಾಗಿತ್ತು. ಅಂಚೆ ಕಚೇರಿ ಸೇರಿದಂತೆ ಕೆಲವೊಂದು ಕಚೇರಿಗಳನ್ನು ಬೆಳಗ್ಗೆ ತೆಗೆಯಲಾಗಿತ್ತಾದರೂ ಪ್ರತಿಭಟನಾಕಾರರು ಕಚೇರಿಗಳಿಗೆ ತೆರಳಿ ಬಂದ್‍ಗೆ ಸಹಕಾರ ನೀಡುವಂತೆ ಕೋರಿದ ನಂತರ ಸಿಬ್ಬಂದಿ ಕಚೇರಿಯಿಂದ ವಾಪಸ್ಸಾಗುತ್ತಿದ್ದ ದೃಶ್ಯಗಳ ಕಂಡು ಬಂದವು. ಶಾಲಾ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ರವಿವಾರವೇ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳತ್ತ ತಲೆ ಹಾಕಿರಲಿಲ್ಲ. ಪ್ರತಿಭಟನಾಕಾರರು ಎಲ್ಲ ರಸ್ತೆಗಳಲ್ಲಿ ಸಂಚರಿಸಿ ಕೆಲವೆಡೆ ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದ ದೃಶ್ಯ ಬೆಳಗ್ಗೆ ಕಂಡು ಬಂದಿತು.

ಇನ್ನು ನಗರದಲ್ಲಿ ಆಟೊ ಸಂಚಾರವೂ ವಿರಳವಾಗಿತ್ತು. ಕೆಲವೊಂದು ಆಟೊಗಳು ಪ್ರತಿಭಟನಾಕಾರರ ಕಣ್ತಪ್ಪಿಸಿಕೊಂಡು ಸಂಚರಿಸುತ್ತಿದ್ದ ದೃಶ್ಯಗಳೂ ಕಂಡು ಬಂದವು. ಲಾರಿ, ಮ್ಯಾಕ್ಸಿಕ್ಯಾಬ್‍ಗಳು ರಸ್ತೆಯಲ್ಲಿ ಓಡಾಡುತ್ತಿದ್ದಾಗ ಅವುಗಳನ್ನು ತಡೆದ ಪ್ರತಿಭಟನಾಕಾರರು ಬಂದ್ ಹಿನ್ನೆಲೆ ಸಂಚರಿಸದಂತೆ ಮನವಿ ಮಾಡುತ್ತಿದ್ದರು. ಹನುಮಂತಪ್ಪ ವೃತ್ತದಲ್ಲಿ ಆಟೊ ಹಾಗೂ ಕ್ಯಾಬ್ ಒಂದರ ಚಕ್ರದ ಗಾಳಿಯನ್ನು ತೆಗೆದ ಪ್ರತಿಭಟನಾಕಾರರು ಬಂದ್ ಇದ್ದರೂ ಸಂಚರಿಸುತ್ತಿದ್ದುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಪಕೋಡ ಬೇಯಿಸಿ ಪ್ರತಿಭಟನೆ: ಬಂದ್ ಹಿನ್ನೆಲೆ ನಗರದ ಹನುಮಂತಪ್ಪ ವೃತ್ತದಲ್ಲಿ ರಸ್ತೆಯಲ್ಲಿಯೇ ಪಕೋಡ ಬೇಯಿಸುವ ಮೂಲಕ ಪ್ರತಿಭಟನಾಕಾರರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿಯೇ ಇಟ್ಟಿಗೆಗಳನ್ನು ಇಟ್ಟು ಒಲೆ ಸಿದ್ಧಪಡಿಸಿದ ಪ್ರತಿಭಟನಾಕಾರರು ಬಾಣಲೆ ಇಟ್ಟು ಪಕೋಡ ಬೇಯಿಸಿ, ಟೀ ಹಾಗೂ ಪಕೋಡವನ್ನು ಸಾರ್ವಜನಿಕರು, ಪೊಲೀಸರಿಗೆ ವಿತರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಮೋದಿ ಪಕೋಡ, ಮೋದಿ ಟೀ ಎಂದು ಕೂಗುತ್ತ ಪಕೋಡ ಮತ್ತು ಟೀ ವಿತರಿಸಿದರು. ವಿಧಾನಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ಸಿಪಿಐ ಮುಖಂಡೆ ರಾಧಾ ಸುಂದರೇಶ್, ಬಿಎಸ್ಪಿ ಮುಖಂಡ ಕೆ.ಟಿ.ರಾಧಾಕೃಷ್ಣ ಇತರರು ಪಕೋಡ ಬೇಯಿಸುವಲ್ಲಿ ನಿರತರಾಗಿದ್ದರು.

ವಾಹನ ಸಂಚಾರ ವಿರಳವಾಗಿದ್ದರಿಂದ ಹನುಮಂತಪ್ಪ ವೃತ್ತದಲ್ಲಿ ಕರವೇ ಕಾರ್ಯಕರ್ತರು ಹಾಗೂ ಸಿಪಿಐ ಕಾರ್ಯಕರ್ತರು ರಸ್ತೆಯಲ್ಲಿಯೇ ಕೆಲಕಾಲ ಕ್ರಿಕೆಟ್ ಆಡಿದರು. ಇನ್ನು ಜಿಲ್ಲೆಯ ತರೀಕೆರೆ, ಕಡೂರು, ಮೂಡಿಗೆರೆ, ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳ ವ್ಯಾಪ್ತಿಯಲ್ಲೂ ಬಂದ್ ಸಂಪೂರ್ಣ ಯಶಸ್ವಿಯಾದ ಬಗ್ಗೆ ವರದಿಯಾಗಿದೆ. ಬಾಳೆಹೊನ್ನೂರಿನಲ್ಲಿ ತೆರೆದಿದ್ದ ಅಂಗಡಿಯನ್ನು ಮುಚ್ಚುವಂತೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದಾಗ ಮಾತಿನ ಚಕಮಕಿ ನಡೆದು ಅಂಗಡಿಯ ಮಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಹೊರತುಪಡಿಸಿ ಬಂದ್ ಬಹುತೇಕ ಶಾಂತಿಯುತವಾಗಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News