ಇಬ್ಬರು ಆರೋಪಿಗಳಿಗೆ ಮರಣದಂಡನೆ,ಓರ್ವನಿಗೆ ಜೀವಾವಧಿ ಶಿಕ್ಷೆ ಘೋಷಿಸಿದ ನ್ಯಾಯಾಲಯ

Update: 2018-09-10 14:04 GMT

ಹೈದರಾಬಾದ್,ಸೆ.10: 2007ರ ಹೈದರಾಬಾದ್ ಅವಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೂರನೇ ಆರೋಪಿಯನ್ನು ಅಪರಾಧಿ ಎಂದು ಇಲ್ಲಿಯ ದ್ವಿತೀಯ ಮಹಾನಗರ ಸತ್ರ ನ್ಯಾಯಾಲಯವು ಸೋಮವಾರ ಘೋಷಿಸಿದೆ. ಪ್ರಕರಣದಲ್ಲಿಯ ಐವರು ಆರೋಪಿಗಳ ಪೈಕಿ ಇಬ್ಬರನ್ನು ಅಪರಾಧಿಗಳೆಂದು ನ್ಯಾಯಾಲಯವು ಈಗಾಗಲೇ ಘೋಷಿಸಿದ್ದು,ಸೋಮವಾರ ಎಲ್ಲ ಮೂವರಿಗೂ ಶಿಕ್ಷೆಯನ್ನು ಪ್ರಕಟಿಸಲಾಗಿದೆ. ಇನ್ನೋರ್ವ ಆರೋಪಿಯ ಹಣೆಬರಹ ಮುಂದಿನ ವಾರ ನಿರ್ಧಾರವಾಗಲಿದೆ. ಇತರ ಇಬ್ಬರು ಆರೋಪಿಗಳನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಈ ಅವಳಿ ಸ್ಫೋಟಗಳಲ್ಲಿ 42 ಜನರು ಸಾವನ್ನಪ್ಪಿ,50ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ಇಂಡಿಯನ್ ಮುಜಾಹಿದೀನ್(ಐಎಂ)ಸದಸ್ಯ ತಾರಿಕ್ ಅಂಜುಂ ವಿರುದ್ಧದ ಇನ್ನೋರ್ವ ಆರೋಪಿಗೆ ಆಶ್ರಯ ನೀಡಿದ್ದ ಆರೋಪವನ್ನು ನ್ಯಾಯಾಲಯವು ಎತ್ತಿಹಿಡಿದಿದೆ. ಸೆ.4ರಂದು ದೋಷ ನಿರ್ಣಯಗೊಂಡಿದ್ದ ಅನಿಕ್ ಶಫೀಕ್ ಸೈಯದ್ ಮತ್ತು ಅಕ್ಬರ್ ಇಸ್ಮಾಯೀಲ್ ಚೌಧರಿ ಅವರಿಗೆ ಸೋಮವಾರ ಮರಣ ದಂಡನೆಯನ್ನು ಪ್ರಕಟಿಸಿದ ನ್ಯಾಯಾಲಯವು ತಾರಿಕ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಫಾರೂಕ್ ಶರ್ಫುದ್ದೀನ್ ಮತ್ತು ಸಾದಿಕ್ ಅಹ್ಮದ್ ಶೇಖ್ ಅವರು ಸಾಕ್ಷಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಂಡಿದ್ದಾರೆ. 2007,ಆ.25ರಂದು ಸಂಜೆ 7:30ರ ಸುಮಾರಿಗೆ ಹೈದರಾಬಾದ್‌ನ ಗೋಕುಲ್ ಚಾಟ್ ಮತ್ತು ಲುಂಬಿನಿ ಪಾರ್ಕ್‌ಗಳಲ್ಲಿ ಏಕಕಾಲದಲ್ಲಿ ಸ್ಫೋಟಗಳು ಸಂಭವಿಸಿದ್ದವು.

ಐಎಂ ಮುಖ್ಯಸ್ಥ ರಿಯಾಜ್ ಭಟ್ಕಳ,ಆತನ ಸೋದರ ಇಕ್ಬಾಲ್ ಭಟ್ಕಳ ಸೇರಿದಂತೆ ೆಪ್ರಕರಣದಲ್ಲಿ ಇತರ ಮೂವರು ಆರೋಪಿಗಳು ಈಗಲೂ ತಲೆಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News