ತೈಲ ಬೆಲೆ ಏರಿಕೆ ಖಂಡಿಸಿ ಭಾರತ್ ಬಂದ್: ರಾಜ್ಯದಲ್ಲಿ ಯಶಸ್ವಿ

Update: 2018-09-10 13:00 GMT

ಬೆಂಗಳೂರು, ಸೆ.10: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಭಾರತ್ ಬಂದ್, ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಯಶಸ್ವಿಯಾಗಿದೆ. 

ಹುಬ್ಬಳ್ಳಿ, ಉಡುಪಿ, ಬಾಗಲಕೋಟೆ, ಉತ್ತರ ಕನ್ನಡ ಸೇರಿದಂತೆ ಕೆಲವೆಡೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ, ಕೆಎಸ್ಸಾರ್ಟಿಸಿ ಬಸ್ಸುಗಳ ಮೇಲೆ ಕಲ್ಲು ತೂರಾಟ, ಸಂಸದ ಪ್ರಹ್ಲಾದ್ ಜೋಶಿ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ, ವಾಟಾಳ್ ನಾಗರಾಜ್ ಎಮ್ಮೆ ಸವಾರಿ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಕುದುರೆ ಸವಾರಿ, ಪೊಲೀಸರು ಲಾಠಿಚಾರ್ಜ್ ನಡೆಸಿದ ಘಟನೆಗಳು ಜರುಗಿದವು.

ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದರು. ಕೆಲವು ಕಡೆ ಹಣ್ಣು ಹಂಪಲು, ತರಕಾರಿ ಅಂಗಡಿಗಳು ಹಾಗೂ ಔಷಧಿ ಅಂಗಡಿ(ಮೆಡಿಕಲ್ ಶಾಪ್)ಗಳನ್ನು ಪ್ರತಿಭಟನಾ ನಿರತರು ಬಲವಂತವಾಗಿ ಮುಚ್ಚಿಸಿದ್ದು ಕಂಡು ಬಂತು. ಬಾಗಲಕೋಟೆಯಲ್ಲಿ ಬಲವಂತವಾಗಿ ಕಾಂಗ್ರೆಸ್ ಕಾರ್ಯಕರ್ತರು ಬಂದ್ ಮಾಡಿಸಲು ಯತ್ನಿಸಿದ ಘಟನೆ ಜರುಗಿದೆ. ಪ್ರತಿಭಟನಾ ಮೆರವಣಿಗೆ ವೇಳೆ ಮಾರುಕಟ್ಟೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು, ಅಂಗಡಿಗಳನ್ನು ಮುಚ್ಚಿಸಿದರು. ಅಲ್ಲದೆ, ಪಾದಚಾರಿ ರಸ್ತೆಯಲ್ಲಿ ಹಣ್ಣಿನ ಬುಟ್ಟಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಮಹಿಳೆಯರನ್ನು ಸ್ಥಳದಿಂದ ತೆರಳುವಂತೆ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಬಂದ್‌ಗೆ ಬೆಂಬಲ ನೀಡಿದ್ದರಿಂದ ಆಡಳಿತ ಯಂತ್ರ ಸ್ತಬ್ಧವಾಗಿತ್ತು. ಆದರೆ, ನ್ಯಾಯಾಲಯದ ಕಾರ್ಯಕಲಾಪಗಳಿಗೆ ಬಂದ್ ನಿಂದಾಗಿ ಯಾವುದೇ ಅಡೆತಡೆಯಾಗಲಿಲ್ಲ. ಎಂದಿನಂತೆ ಹೈಕೋರ್ಟ್, ಸಿಟಿಸಿವಿಲ್ ಕೋರ್ಟ್ ಹಾಗೂ ಮ್ಯಾಜಿಸ್ಟ್ರೇಟ್‌ ಕೋರ್ಟುಗಳಲ್ಲಿ ವಕೀಲರು ಹಾಜರಿದ್ದು, ಕಾರ್ಯಕಲಾಪಗಳು ಸುಗಮವಾಗಿ ನಡೆದವು.

ಬಿಎಂಟಿಸಿ, ಕೆಎಸ್ಸಾರ್ಟಿಸಿ, ಖಾಸಗಿ ಬಸ್ಸುಗಳು, ಟ್ಯಾಕ್ಸಿ ಕ್ಯಾಬ್‌ಗಳು ಹಾಗೂ ಆಟೋ ರಿಕ್ಷಾಗಳು ಬೀದಿಗಿಳಿಯಲಿಲ್ಲ. ಇದರಿಂದಾಗಿ, ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಶಾಂತಿನಗರ, ಮೈಸೂರು ರಸ್ತೆ, ಶಿವಾಜಿನಗರ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಕೆಲವು ಕಡೆ ಆಟೋ ರಿಕ್ಷಾದವರು ಪ್ರಯಾಣಿಕರಿಂದ ದುಬಾರಿ ಹಣಕ್ಕೆ ಬೇಡಿಕೆ ಇಟ್ಟ ಆರೋಪಗಳು ಕೇಳಿ ಬಂದವು.

ರಾಜ್ಯದ ಕೆಲವೆಡೆ ಬಸ್ಸುಗಳು ಬೆಳಗ್ಗೆ ಓಡಾಟ ಆರಂಭಿಸಿದರೂ ಪ್ರತಿಭಟನಾಕಾರರು ಬಲವಂತವಾಗಿ ಬಸ್ ಸಂಚಾರವನ್ನು ತಡೆ ಹಿಡಿದ ಘಟನೆಗಳು ನಡೆದವು. ಮೈಸೂರು, ದಾವಣಗೆರೆ, ಹುಬ್ಬಳ್ಳಿ, ಹಾಸನ, ಚಿಕ್ಕಮಗಳೂರು ಸೇರಿದಂತೆ ಇನ್ನಿತರೆಡೆ ಕರವೇ ಕಾರ್ಯಕರ್ತರು ಟೈರುಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರೆ.

ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆದರೆ, ಜೆಡಿಎಸ್ ಪಕ್ಷದವರು ಎತ್ತಿನ ಬಂಡಿಗಳಲ್ಲಿ ಸಂಚರಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಅಲ್ಲದೆ, ಹಲವೆಡೆ ಪ್ರಧಾನಿ ನರೇಂದ್ರಮೋದಿಯ ಪ್ರತಿಕೃತಿಗಳನ್ನು ದಹಿಸಿ ಪ್ರತಿಭಟನೆ ನಡೆಸಲಾಯಿತು.

ವಾಟಾಳ್ ಎಮ್ಮೆ ಸವಾರಿ: ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಎಮ್ಮೆ ಮೇಲೆ ಕುಳಿತು ಸವಾರಿ ಮಾಡುವ ಮೂಲಕ ತೈಲ ದರ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ಸುಮಾರು 2 ಸಾವಿರ ಕನ್ನಡಪರ ಸಂಘಟನೆಗಳು ಈ ಬಂದ್‌ಗೆ ಬೆಂಬಲ ನೀಡಿವೆ ಎಂದರು.

ತೈಲ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರದ ನಿಲುವು ಎಮ್ಮೆ ಸವಾರಿ ಮಾಡಿದ್ದೇವೆ. ಮೋದಿ ಸರಕಾರ ಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ. ಬೆಲೆ ಏರಿಕೆ ನಿಯಂತ್ರಣ ಮಾಡದೆ ಇದ್ದರೆ ಜನತೆ ದಂಗೆ ಏಳುತ್ತಾರೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಸ್ ಪ್ರಯಾಣ ದರ ಹೆಚ್ಚಳ ಮಾಡಬಾರದು. ಈ ಬಂದ್ ಕೇವಲ ಕೇಂದ್ರ ಸರಕಾರಕ್ಕೆ ಅಷ್ಟೇ ಅಲ್ಲ, ರಾಜ್ಯ ಸರಕಾರಕ್ಕೂ ಅನ್ವಯವಾಗುತ್ತದೆ. ತೈಲ ಬೆಲೆ ದರ ಏರಿಕೆಯನ್ನು ಖಂಡಿಸಿ ನಾವೇ ಬಂದ್‌ಗೆ ಕರೆ ನೀಡಲು ಉದ್ದೇಶಿಸಿದ್ದೆವು. ಆದರೆ, ಕಾಂಗ್ರೆಸ್ ಬಂದ್ ಕರೆ ಕೊಟ್ಟಿದ್ದರಿಂದ, ನಾವು ಅವರಿಗೆ ಬೆಂಬಲ ನೀಡಿದ್ದೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ತೈಲ ಬೆಲೆಯೇರಿಕೆ ಖಂಡಿಸಿ ರಾಜಭವನದ ವರೆಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ನಗರದ ಮೇಕ್ರಿ ಸರ್ಕಲ್ ಬಳಿ ಕಾರಿಗೆ ಹಗ್ಗ ಕಟ್ಟಿ ಎಳೆಯುವುದರ ಮೂಲಕ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಮೇಖ್ರಿ ಸರ್ಕಲ್ನಿಂದ ರಾಜಭವನ ಕಡೆ ತೆರಳುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ಪ್ಯಾಲೇಸ್ ಗುಟ್ಟಹಳ್ಳಿ ಬಳಿ ವಶಕ್ಕೆ ಪಡೆದರು.

ಶರವಣ ನಡೆಗೆ ಸಿಂಧ್ಯಾ ಗರಂ: ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಕುದುರೆ ಸವಾರಿ ಮೂಲಕ ಪುರಭವನ ಎದುರು ಜೆಡಿಎಸ್ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿದರು. ಇದನ್ನು ಕಂಡು ಆಕ್ರೋಶಗೊಂಡ ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ, ಮೊದಲು ಕುದುರೆಯಿಂದ ಕೆಳಗೆ ಇಳಿಯಿರಿ. ನಿಮ್ಮ ವರ್ತನೆಯಿಂದಾಗಿ ಪ್ರತಿಭಟನೆ ಹಾಳಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಣೆ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರತ ಬಂದ್ ಯಶಸ್ವಿಯಾಗಿದ್ದರೂ ರಾಜ್ಯ ಸರಕಾರದ ಇಂದಿರಾ ಕ್ಯಾಂಟೀನ್‌ಗಳು ಮಾತ್ರ ಎಂದಿನಂತೆ ತೆರೆದಿದ್ದವು. ಖಾಸಗಿ ಹೊಟೇಲ್‌ಗಳು ಮುಚ್ಚಿದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್ ಮೊರೆ ಹೋಗುವಂತಾಯಿತು.

ಸರಕಾರಕ್ಕೆ 200 ಕೋಟಿ ರೂ.ನಷ್ಟ?: ಭಾರತ ಬಂದ್‌ನಿಂದಾಗಿ ರಾಜ್ಯ ಸರಕಾರದ ಬೊಕ್ಕಸಕ್ಕೆ ತೆರಿಗೆ ಮೂಲಕ ಸಂಗ್ರಹವಾಗಬೇಕಿದ್ದ ಸುಮಾರು 200 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ, ವ್ಯಾಪಾರ ವಹಿವಾಟು ಸ್ತಬ್ಧಗೊಂಡಿದ್ದರಿಂದ ಸುಮಾರು ಎರಡು ಸಾವಿರ ಕೋಟಿ ರೂ.ಗಳ ನಷ್ಟ ರಾಜ್ಯದಲ್ಲಿ ಸಂಭವಿಸಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ರಾಜಧಾನಿಯಲ್ಲಿ ಶಾಂತಿಯುತ ಬಂದ್: ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಯಾವುದೆ ಅಹಿತಕರ ಘಟನೆ ನಡೆದಿಲ್ಲ, ಎಲ್ಲವು ಶಾಂತಿಯುತವಾಗಿದೆ. ಮೈಸೂರು ಬ್ಯಾಂಕ್ ಸರ್ಕಲ್, ಪುರಭವನ, ವೌರ್ಯ ಸರ್ಕಲ್, ರೈಲ್ವೆ ನಿಲ್ದಾಣ ಸೇರಿದಂತೆ ಇನ್ನಿತರೆಡೆ ಶಾಂತಿಯುತವಾಗಿಯೇ ಪ್ರತಿಭಟನೆಗಳು ನಡೆದಿವೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ತಿಳಿಸಿದರು. ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಭದ್ರತೆಗೆ ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು ಸೇರಿದಂತೆ 15 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು ಎಂದು ಅವರು ಹೇಳಿದರು.

ಜೊತೆಗೆ, 30 ಕೆಎಸ್‌ಆರ್‌ಪಿ ತುಕಡಿ, 200 ಹೊಯ್ಸಳ ವಾಹನಗಳನ್ನು ಗಸ್ತು ತಿರುಗಲು ನಿಯೋಜಿಸಲಾಗಿತ್ತು. ಚಾಲುಕ್ಯ ವೃತ್ತದಲ್ಲಿ ಕೆಲವರು ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಆರೋಪದ ಮೇರೆಗೆ 14 ಜನರನ್ನು ಹಾಗೂ ಮೇಖ್ರಿ ವೃತ್ತದ ಬಳಿ 40 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸುನೀಲ್‌ಕುಮಾರ್ ತಿಳಿಸಿದರು.

ಸಂಸದ ಜೋಶಿ ಕಚೇರಿಗೆ ಮುತ್ತಿಗೆ: ಹುಬ್ಬಳ್ಳಿ-ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಕಚೇರಿಗೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಹುಬ್ಬಳ್ಳಿ ಉಪನಗರ ಠಾಣೆ ಎದುರು ಜೆಡಿಎಸ್ ಕಾರ್ಯಕರ್ತರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ವಿಮಾನ ನಿಲ್ದಾಣಕ್ಕೂ ತಟ್ಟಿದ ಬಂದ್ ಬಿಸಿ: ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೂ ಬಂದ್ ಬಿಸಿ ತಟ್ಟಿದೆ. ವಿಮಾನ ನಿಲ್ದಾಣಕ್ಕೆ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಪ್ರದೇಶದಿಂದ ಆಗಮಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದರೂ, ದೇಶ-ವಿದೇಶಗಳಿಂದ ಬರುವ ಪ್ರಯಾಣಿಕರ ಸಂಖ್ಯೆ ಎಂದಿನಂತೆ ಇದ್ದವು.

ಪ್ರಯಾಣಿಕರಿಗೆ ಏರ್‌ಪೋರ್ಟ್ ಟ್ಯಾಕ್ಸಿಗಳ ಮೂಲಕ ನಗರಕ್ಕೆ ಕಳುಹಿಸಲು ಅಧಿಕಾರಿಗಳು ಪ್ರಯತ್ನಿಸಿದರು. ಆದರೆ, ಕೆಲವು ಕನ್ನಡಪರ ಸಂಘಟನೆಗಳು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದರಿಂದ ಹಾಗೂ ಇದೇ ರಸ್ತೆಯಲ್ಲಿ ಸಂಭವಿಸಿದ ಸರಣಿ ಅಪಘಾತದಿಂದ ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.

ಮೋದಿ ಪಾಪದ ಕೊಡ ತುಂಬಿದೆ
ಪ್ರಧಾನಿ ನರೇಂದ್ರಮೋದಿಯ ಪಾಪದ ಕೊಡ ತುಂಬಿದೆ. ಎನ್‌ಡಿಎ ಸರಕಾರ ಪತನದ ಅಂಚಿಗೆ ಬಂದು ನಿಂತಿದೆ. ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಅದರ ಪರಿಣಾಮವಾಗಿಯೇ, ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ತೈಲ ಬೆಲೆ ಗಗನಕ್ಕೇರಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಸರಕಾರ ಪತನ ಖಚಿತ. ಬಿಜೆಪಿಯ ಪೊಳ್ಳು ಭರವಸೆಗಳಿಂದ ಬೇಸತ್ತಿರುವ ಜನತೆ, ಮೋದಿಯನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲಿದ್ದಾರೆ.
-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್ ನಾಯಕ

ಉಡುಪಿಯಲ್ಲಿ ನಿಷೇಧಾಜ್ಞೆ ಜಾರಿ
ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದ ಹಿನ್ನೆಲೆಯಲ್ಲಿ ಉಡುಪಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೆ, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಪ್ರದೀಪ್ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಯಾವುದೇ ಬಗೆಯ ವಿಜಯೋತ್ಸವ, ಕರಾಳೋತ್ಸವ ಆಚರಿಸದಂತೆ ಎಚ್ಚರಿಕೆ ನೀಡಿರುವುದಲ್ಲದೆ, ಆಯುಧಗಳು, ಮಾರಕಾಸ್ತ್ರಗಳನ್ನು ಕೊಂಡೊಯ್ಯದಂತೆ ಎಚ್ಚರಿಕೆ ನೀಡಲಾಗಿದೆ.

ನಮ್ಮ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವಾಗ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಇದರಿಂದಾಗಿ, ಒಬ್ಬನ ಕೈ ತುಂಡಾಗಿದೆ, ನಾಲ್ವರಿಗೆ ಗಾಯಗಳಾಗಿವೆ. ಈ ವಿಷಯವನ್ನು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು. ಪಕ್ಷದ ಮುಖಂಡರೊಂದಿಗೆ ಇಂದಿನ ಘಟನೆ ಕುರಿತು ಸಮಾಲೋಚನೆ ಮಾಡಲಾಗುವುದು. ಒಂದು ವೇಳೆ ಪೊಲೀಸರು ಅನಾವಶ್ಯಕವಾಗಿ ಲಾಠಿಚಾರ್ಜ್ ಮಾಡಿದ್ದರೆ ಎಸ್ಪಿ ಕಚೇರಿ ಎದುರು ಪಕ್ಷದ ವತಿಯಿಂದ ಧರಣಿ ನಡೆಸುತ್ತೇವೆ.
-ವಿನಯ್‌ ಕುಮಾರ್ ಸೊರಕೆ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News