ಭಾರತ್ ಬಂದ್ ಗೆ ಶಿವಮೊಗ್ಗದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ: ಜನಜೀವನ ಅಸ್ತವ್ಯಸ್ತ

Update: 2018-09-10 13:45 GMT

ಶಿವಮೊಗ್ಗ, ಸೆ. 10: ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಸೋಮವಾರ ಕರೆ ನೀಡಿದ್ದ 'ಭಾರತ್ ಬಂದ್'ಗೆ ಶಿವಮೊಗ್ಗ ನಗರದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಜನಜೀವನ ಸಂಪೂರ್ಣ ಸ್ಥಬ್ಧವಾಗಿತ್ತು. 

ನಗರದ ದೈನಂದಿನ ವ್ಯಾಪಾರ - ವಹಿವಾಟು, ಪ್ರಯಾಣಿಕ ವಾಹನ ಸಂಚಾರ ವ್ಯವಸ್ಥೆ ಮೇಲೆ ಬಂದ್ ಸಾಕಷ್ಟು ಪರಿಣಾಮ ಬೀರಿತ್ತು. ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದವು. 

ಸ್ಥಗಿತ: ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು. ಖಾಸಗಿ ಬಸ್ ಮಾಲಕರ ಸಂಘಗಳು ಬಂದ್ ಬೆಂಬಲಿಸಿದ್ದವು. ಈ ಕಾರಣದಿಂದ ಶಿವಮೊಗ್ಗ ನಗರದಿಂದಿಂದ ಪರ ಊರುಗಳಿಗೆ ತೆರಳುವ ಹಾಗೂ ನಗರದಲ್ಲಿ ಸಂಚರಿಸುವ ಖಾಸಗಿ ಬಸ್‍ಗಳು ರಸ್ತೆಗಿಳಿಯಲಿಲ್ಲ. ಮತ್ತೊಂದೆಡೆ ಬೆಳಿಗ್ಗೆಯವರೆಗೂ ಸಂಚಾರ ನಡೆಸಿದ ಸರ್ಕಾರಿ ಬಸ್‍ಗಳು ನಂತರ ರಸ್ತೆಗಿಳಿಯಲಿಲ್ಲ. ಖಾಸಗಿ, ಸರ್ಕಾರಿ ಹಾಗೂ ಸಿಟಿ ಬಸ್‍ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರ ಪರದಾಟ ತೀವ್ರವಾಗಿತ್ತು. 

ನಗರದ ಪ್ರಮುಖ ವ್ಯಾಪಾರ-ವಹಿವಾಟು ಕೇಂದ್ರಗಳಾದ ಗಾಂಧಿ ಬಜಾರ್, ನೆಹರೂ ರಸ್ತೆ, ಬಿ.ಹೆಚ್.ರಸ್ತೆ, ಶಿವಪ್ಪನಾಯಕ ವೃತ್ತ, ಹೂವಿನ ಮಾರ್ಕೆಟ್, ದುರ್ಗಿಗುಡಿ, ಜೈಲ್ ರಸ್ತೆ ಸೇರಿದಂತೆ ಬಹುತೇಕ ಎಲ್ಲ ರಸ್ತೆಗಳಲ್ಲಿ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಚಿತ್ರಮಂದಿರಗಳು ಬಾಗಿಲು ಹಾಕಿದ್ದವು.
ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ಸಿಬ್ಬಂದಿಗಳ ಸಂಖ್ಯೆ ವಿರಳವಾಗಿದ್ದುದು ಕಂಡುಬಂತು. ಪೆಟ್ರೋಲ್ ಬಂಕ್, ಹಾಲಿನ ಮಳಿಗೆ, ಮೆಡಿಕಲ್ ಶಾಪ್, ಆಸ್ಪತ್ರೆಗಳು ಕಾರ್ಯನಿರ್ವಹಣೆ ಮಾಡಿದವು. 

ಸಖತ್ ಡಿಮ್ಯಾಂಡ್: ಸರ್ಕಾರಿ ಹಾಗೂ ಖಾಸಗಿ ಸಿಟಿ ಬಸ್‍ಗಳ ಸಂಚರಿಸದ ಕಾರಣದಿಂದ ಆಟೋ, ಬಾಡಿಗೆ ಮ್ಯಾಕ್ಸಿಕ್ಯಾಬ್‍ಗಳಿಗೆ ಸಖತ್ ಡಿಮ್ಯಾಂಡ್ ಕಂಡುಬಂತು. ರೈಲು ಸಂಚಾರ ಎಂದಿನಂತಿದ್ದ ಕಾರಣದಿಂದ ಬೆಂಗಳೂರು, ಮೈಸೂರು, ಸಾಗರ, ತಾಳಗುಪ್ಪ ಕಡೆ ಸಂಚರಿಸುವ ಪ್ರಯಾಣಿಕರು ರೈಲನ್ನು ಅವಲಂಬಿಸಿದ್ದರು. ಇದರಿಂದ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿತ್ತು. 

ಬಿಗಿ ಭದ್ರತೆ: ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ವ್ಯಾಪಕ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಭದ್ರತೆಯ ಮೇಲುಸ್ತುವಾರಿ ವಹಿಸಿದ್ದರು. 

ಕೇಂದ್ರದ ವಿರುದ್ದ ಕಾಂಗ್ರೆಸ್‍ ಪ್ರತಿಭಟನಾ ರ್ಯಾಲಿ 
ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷವು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿತು. 

ರಾಮಣ್ಣ ಶ್ರೇಷ್ಠಿ ಪಾರ್ಕ್‍ನಿಂದ ಆರಂಭವಾದ ಈ ರ್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಜಿಲ್ಲಾಧಿಕಾರ ಕಚೇರಿ ಆವರಣದಲ್ಲಿ ಸಾಂಕೇತಿಕ ಧರಣಿ ನಡೆಸಿದ ಕಾರ್ಯಕರ್ತರು, ನಂತರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು. 

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಚ್ಛೇ ದಿನ್ ತರುವುದಾಗಿ ಹೇಳಿ ಆಡಳಿತಕ್ಕೆ ಬಂತು. ಆದರೆ ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶವಾಸಿಗಳು ಕೆಟ್ಟ ದಿನಗಳನ್ನು ನೋಡುವಂತಾಯಿತು. ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ಜನಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿ ಪರಿಣಮಿಸಿದೆ. ಈ ಸರ್ಕಾರ ಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ. ಇದೊಂದು ವೈಫಲ್ಯ ಸರ್ಕಾರವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. 

ಪ್ರಸ್ತುತ ಇಂಧನ ಬೆಲೆ ಗಗನಕ್ಕೇರುತ್ತಿದೆ. ನಿಯಂತ್ರಣಕ್ಕೆ ಸಾಧ್ಯವಾಗದ ಮಟ್ಟಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಇಷ್ಟೆಲ್ಲದರ ಹೊರತಾಗಿಯೂ ಕೇಂದ್ರ ಸರ್ಕಾರ ಬೆಲೆ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯವಹಿಸಿದೆ. ಪ್ರಧಾನನಿ ಮೋದಿಯವರು ಕೇವಲ ಪೊಳ್ಳು ಭರವಸೆ, ಆಶ್ವಾಸನೆ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News