ಬ್ಯಾಂಕ್ ಹಗರಣ: ನೀರವ್ ಮೋದಿ ಸಹೋದರಿ ವಿರುದ್ಧ ಇಂಟರ್‌ಪೋಲ್‌ನಿಂದ ವಾರಂಟ್

Update: 2018-09-10 14:22 GMT

ಹೊಸದಿಲ್ಲಿ, ಸೆ.10: ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿಯ ಸಹೋದರಿ ಪೂರ್ವಿ ಮೋದಿ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.

13,000 ಕೋಟಿ ರೂ. ನ ಬೃಹತ್ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ, ನೀರವ್ ಮೋದಿ ಸಹೋದರಿ, ಬೆಲ್ಜಿಯಂ ಪೌರತ್ವ ಹೊಂದಿರುವ ಪೂರ್ವಿ ಮೋದಿಯನ್ನು ಬಂಧಿಸುವಲ್ಲಿ ಸದ್ಯ ಈ ರೆಡ್ ಕಾರ್ನರ್ ನೋಟಿಸ್ ಅಂತರ್‌ರಾಷ್ಟ್ರೀಯ ಬಂಧನ ವಾರಂಟ್‌ನಂತೆ ಕಾರ್ಯನಿರ್ವಹಿಸುತ್ತದೆ. ಬೃಹತ್ ಬ್ಯಾಂಕ್ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ, ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣದಲ್ಲಿ ಗಳಿಸಿದ ಹಣವನ್ನು ವಂಚನೆಯಿಂದ ಇತರ ಮೂಲಗಳ ಮೂಲಕ ಪಡೆದುಕೊಳ್ಳುವಲ್ಲಿ ಪೂರ್ವಿ ಮೋದಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಇದರಿಂದ 950 ಕೋಟಿ ರೂ. ಲಾಭ ಪಡೆದುಕೊಂಡಿದ್ದಾರೆ ಎಂದು ತಮ್ಮ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿತ್ತು. ಪೂರ್ವಿ ಮೋದಿ, ವಂಚನೆಯ ಮೂಲಕ ಪಡೆದ ಹಣವನ್ನು ವರ್ಗಾಯಿಸಲೆಂದೇ ಯುಎಇ, ಬ್ರಿಟಿಶ್ ವರ್ಜಿನ್ ದ್ವೀಪಗಳು ಮತ್ತು ಸಿಂಗಾಪುರದಲ್ಲಿ ರಚಿಸಲಾದ ನಕಲಿ ಕಂಪೆನಿಗಳ ಮಾಲಕಿ/ನಿರ್ದೇಶಕಿಯೂ ಆಗಿದ್ದಾರೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿದ್ದವು. ಹಲವು ಸಮನ್ಸ್‌ಗಳನ್ನು ಜಾರಿ ಮಾಡಿದರೂ ತನಿಖೆಗೆ ಹಾಜರಾಗದಿರುವ ಪೂರ್ವಿ ವಿರುದ್ಧ ಇಡಿ ಜಾಗತಿಕ ಬಂಧನ ವಾರಂಟ್ ವಿಧಿಸುವಂತೆ ಮನವಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News