ಅಚ್ಛೇದಿನ್ ಬದಲಿಗೆ ದುರ್ದಿನ ಬಂದಿದೆ: ಮಾಜಿ ಸಚಿವ ಎಸ್.ಆರ್.ಪಾಟೀಲ್

Update: 2018-09-10 15:35 GMT

ಬಾಗಲಕೋಟೆ, ಸೆ. 10: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ ಜನರಿಗೆ ಅಚ್ಛೇದಿನ್ ಬದಲಿಗೆ, ದುರ್ದಿನಗಳು ಬಂದಿವೆ ಎಂದು ಮಾಜಿ ಸಚಿವ ಹಾಗೂ ಮೇಲ್ಮನೆ ಸದಸ್ಯ ಎಸ್.ಆರ್.ಪಾಟೀಲ್ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕರೆ ನೀಡಿದ್ದ ‘ಭಾರತ ಬಂದ್’ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಆದರೂ, ದೇಶದಲ್ಲಿ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆಯಾಗಿ ಜನ ಸಾಮಾನ್ಯರು ದಿನ ನಿತ್ಯದ ಜೀವನ ನಡೆಸುವುದು ದುಸ್ತರವಾಗಿದೆ. ಈ ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 120 ರಿಂದ 150 ರೂ.ಇದ್ದರೂ ದೇಶದಲ್ಲಿ ಪೆಟ್ರೋಲ್ ಬೆಲೆ 50 ರಿಂದ 60 ರೂ.ಗಳಿತ್ತು. ಆದರೆ ಇಂದು ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 70 ರೂ.ಗಳಿಗೆ ಇಳಿದಿದ್ದರೂ ದೇಶದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 83ರೂ., ಡಿಸೇಲ್ 74 ರೂ. ಹಾಗೂ ಅಡುಗೆ ಅನಿಲ ಸಿಲಿಂಡರ್ ಬೆಲೆ 846 ರೂ.ಗಳ ಗಡಿ ತಲುಪಿದೆ. ಹೀಗಾದಲ್ಲಿ ದೇಶದ ಜನ ಬದುಕುವುದು ಹೇಗೆ? ಎಂದು ಖಾರವಾಗಿ ಪ್ರಶ್ನಿಸಿದರು.

ಮಾಜಿ ಸಚಿವ ಎಚ್.ವೈ.ಮೇಟಿ ಮಾತನಾಡಿ, ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಜನ ನೆಮ್ಮದಿಯಿಂದ ಬದುಕುವುದೇ ದುಸ್ತರವಾಗಿದೆ. ಸುಳ್ಳು ಮಾತಿಗೆ ಮರುಳಾಗಿ ಯುವಜನತೆ ಯಾವುದೇ ಕಾರಣಕ್ಕೂ ಬಿಜೆಪಿ ಬೆಂಬಲಿಸಬಾರದು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸೌದಾಗರ, ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಮುಖಂಡರಾದ ಅನಿಲ್‌ಕುಮಾರ ದಡ್ಡಿ, ಚನ್ನವೀರ ಅಂಗಡಿ, ರಾಜು ಮನ್ನಿಕೇರಿ, ಎಂ.ಎಲ್.ಶಾಂತಗಿರಿ, ಹನಮಂತ ರಾಕುಂಪಿ, ನೂರ್ ಅಹ್ಮದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News