ದಾವಣಗೆರೆ: ಭಾರತ್ ಬಂದ್ ಬಹುತೇಕ ಯಶಸ್ವಿ; ಅಲ್ಲಲ್ಲಿ ಪ್ರತಿಭಟನೆ

Update: 2018-09-10 16:30 GMT

ದಾವಣಗೆರೆ,ಸೆ.10: ಇಂಧನಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಜಿಲ್ಲಾದ್ಯಂತ ಯಶಸ್ವಿಯಾಗಿದೆ. 

ಸೋಮವಾರ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ, ಬೆಂಕಿ ದಹನ, ಬೈಕ್ ರ್ಯಾಲಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭಾರತ ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಮುಖಂಡರು, ಜನ ಪ್ರತಿನಿಧಿಗಳು, ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸುವ ಮೂಲಕ ಬಂದ್‍ಗೆ ಬೆಂಬಲಿಸುವಂತೆ, ಅಂಗಡಿ ಮುಂಗಟ್ಟು ಮುಚ್ಚಿಸುತ್ತಾ, ಕೇಂದ್ರ, ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದರು.

ಕಾಂಗ್ರೆಸ್, ಜೆಡಿಎಸ್, ಕರವೇ ವಿಭಿನ್ನವಾಗಿ ಪ್ರತಿಭಟನೆ ನಡೆಸಿದವು. ಈ ಮಧ್ಯೆ ಬಂದ್ ವೇಳೆ ಕಾರಿನ ಗಾಜನ್ನು ಒಡೆದ ಘಟನೆ ಹರಪನಹಳ್ಳಿಯಲ್ಲಿ ನಡೆದರೆ, ಟೈಯರ್ ಗೆ ಬೆಂಕಿ ಹಚ್ಚುವ ವಿಚಾರಕ್ಕೆ ಪೊಲೀಸರು, ಕಾಂಗ್ರೆಸ್ ಮುಖಂಡರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು.

ನಗರದೆಲ್ಲೆಡೆ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು, ಖಾಸಗಿ ಬಸ್ ಮಾಲಕರು ಬಂದ್‍ಗೆ ಬೆಂಬಲ ನೀಡಿದ್ದು, ಕೆಎಸ್‍ಆರ್‍ಟಿಸಿ ಬಸ್‍ಗಳು ಸಹ ರಸ್ತೆಗಿಳಿಯಲಿಲ್ಲ. ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದವು. ಹಲವೆಡೆ ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ವಸೂಲಿ ಮಾಡುತ್ತಿರುವುದು ಮಾಮೂಲಾಗಿತ್ತು.

ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಚಿತ್ರಮಂದಿರಗಳು, ಹೋಟೆಲ್‍ಗಳು, ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರು. ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿತ್ತು. ಉಳಿದಂತೆ ರೋಗಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಆಸ್ಪತ್ರೆಗಳು ಕಾರ್ಯನಿರ್ವಹಿಸಿದವು, ಬ್ಯಾಂಕ್‍ಗಳು, ಮೆಡಿಕಲ್ ಶಾಪ್‍ಗಳು ಸಹ ಕಾರ್ಯನಿರ್ವಹಿಸಿದವು.

ಸಂಘಟನೆಗಳ ಬೆಂಬಲ: ಇನ್ನೂ ಎಡ ಪಕ್ಷಗಳು ಪ್ರತ್ಯೇಕ ಹರತಾಳ ನಡೆಸಿ, ಬಹಿರಂಗ ಸಭೆ ನಡೆಸುವ ಮೂಲಕ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ತೀವ್ರ ಕಿಡಿ ಕಾರಿದ್ದರೆ, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆ, ತಾಂಡ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಬಂದ್ ಬೆಂಬಲಿಸಿ ಪ್ರತ್ಯೇಕ ಪ್ರತಿಭಟನೆ ನಡೆಸಿದವು. ವಿಶ್ವಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜ್ಯಾಧ್ಯಕ್ಷ ಕೆ.ಜಿ. ಯಲ್ಲಪ್ಪ ನೇತೃತ್ವದಲ್ಲಿ ಗಾಂಧಿವೃತ್ತದಲ್ಲಿ ಕಟ್ಟಿಗೆ ಹಾಗೂ ಪೇಪರ್‍ಗಳಿಂದ ಒಲೆ ಹಚ್ಚಿ ಟೀ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಲ್ಲದೆ, ಸಿಲಿಂಡರ್, ಖಾಲಿ ಕ್ಯಾನ್ ಪ್ರದರ್ಶಿಸಿದರು. ನಂತರ ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು. ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ರಾಜ್ಯಾಧ್ಯಕ್ಷ ಟಾರ್ಗೇಟ್ ಅಸ್ಲಂ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಎತ್ತಿನ ಬಂಡೆಯಲ್ಲಿ ವಿನೂತನ ಪ್ರತಿಭಟನೆ: ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ ಹಾಗೂ ಕಾರ್ಯಕರ್ತರು ಎತ್ತಿನ ಬಂಡಿಯಲ್ಲಿ ಪ್ರಯಾಣ ಮಾಡಿ ತೈಲ ಬೆಲೆ ಏರಿಕೆ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಕೇಂದ್ರ ಸರ್ಕಾರದ ಭೂತ ದಹನ ನಡೆಸಿ ಎತ್ತಿನ ಗಾಡಿ ಮೂಲಕ ಉಪವಿಭಾಗಾಧಿಕಾರಿ ಕಚೇರಿಯವರೆಗೂ ಮೆರವಣಿಗೆ ಮೂಲಕ ತೆರಳಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪದೇ ಪದೇ ತೈಲ ದರ ಏರಿಕೆ ಮಾಡಿರುವುದರಿಂದ ಸಾಮಾನ್ಯ ಜನರು ಜೀವನ ನಡೆಸುವುದು ಕಷ್ಟಕರವಾಗಿದೆ. ಈ ಕೂಡಲೇ ಬೆಲೆ ಏರಿಕೆ ನಿಯಂತ್ರಣ ಮಾಡಬೇಕು. ಇಲ್ಲದಿದ್ದರೆ ಜನತೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಜೆಡಿಎಸ್. ಅಧ್ಯಕ್ಷ ಬಿ. ಚಿದಾನಂದಪ್ಪ, ಕಾರ್ಯಾಧ್ಯಕ್ಷ ಗಣೇಶ್ ಟಿ. ದಾಸಕರಿಯಪ್ಪ, ಕೆ.ಎ. ಪಾಪಣ್ಣ, ಯೋಗೀಶ್, ವೀರೇಂದ್ರಚಾರಿ, ಸೈಯದ್ ಫಕ್ರುದ್ದೀನ್, ಕಡತಿ ಅಂಜಿನಪ್ಪ, ಬಿ.ಟಿ. ಬಾಲಚಂದ್ರಪ್ಪ, ಶ್ರೀನಿವಾಸ್ ಎ. ಭಾಗವಹಿಸಿ ಭಾರತ್ ಬಂದ್‍ನ್ನು ಯಶಸ್ವಿಗೊಳಿಸಿದರು. 

ಬಂದ್ ಆಚರಣೆಯಲ್ಲಿ ಎಪಿಎಂಸಿ ಅಧ್ಯಕ್ಷ ಮುದೇಗೌಡರ ಗಿರೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಪಾಲಿಕೆ ಉಪ ಮೇಯರ್ ಚಮನ್ ಸಾಬ್, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ, ಪಾಲಿಕೆ ಸದಸ್ಯರುಗಳಾದ ಎಂ.ಹಾಲೇಶ್, ಕಟ್ಟಿಗೆ ಡಿಪೋ ಬಸಪ್ಪ, ಹಂಚಿನಮನೆ ತಿಪ್ಪಣ್ಣ, ಗೌಡ್ರ ರಾಜಶೇಖರ್, ಬಿ.ಜಿ.ಲಿಂಗರಾಜ್, ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪೊಲೀಸರೊಂದಿಗೆ ಮಾತಿನ ಚಕಮಕ
ದಾವಣಗೆರೆ ನಗರದ ಪ್ರಮುಖ ವೃತ್ತಗಳಾದ ಅಜಾದ್ ನಗರದ ಅರಳಿ ಮರ ವೃತ್ತದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಟೈರ್ ಗಳಿಗೆ ಬೆಂಕಿ ಹಚ್ಚಲು ತೆರಳಿದಾಗ ಹಾಗೂ ಪಿಬಿ ರಸ್ತೆಯ ಮಧ್ಯಭಾಗದಲ್ಲಿ ಟೈರ್‍ಗಳಿಗೆ ಬೆಂಕಿ ಹಚ್ಚಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರ ಪ್ರಯತ್ನ ಪೊಲೀಸರು ವಿಫಲಗೊಳಿಸಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಸಹನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News