ಲೋಕಸಭೆಗೆ ಈಶ್ವರಪ್ಪ ಮತ್ತು ಅವರ ಪುತ್ರ ಕೂಡ ಟಿಕೆಟ್ ಆಕಾಂಕ್ಷಿ: ಆಯನೂರು ಮಂಜುನಾಥ್

Update: 2018-09-10 16:39 GMT

ಶಿವಮೊಗ್ಗ, ಸೆ. 10: ಲೋಕಸಭೆ ಚುನಾವಣೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿ.ವೈ.ರಾಘವೇಂದ್ರ ಜೊತೆಗೆ ಇನ್ನೂ ಹಲವು ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆಗೆ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪರೋಕ್ಷ ಕಿಡಿಕಾರಿದ್ದಾರೆ. 

ಕೆ.ಎಸ್.ಈಶ್ವರಪ್ಪ ಹೇಳಿದಂತೆ ಹಲವರು ಸ್ಪರ್ಧಾಕಾಂಕ್ಷಿಗಳಿದ್ದಾರೆ. ಇದರಲ್ಲಿ ಈಶ್ವರಪ್ಪ ಅವರ ಹೆಸರು ಕೂಡ ಇದೆ. ಅವರೇ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಆಶ್ಚರ್ಯವಿಲ್ಲ. ಜೊತೆಗೆ ಅವರ ಪುತ್ರ ಕೆ.ಇ.ಕಾಂತೇಶ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ' ಎಂದು ಅವರು ಹೇಳಿದ್ದಾರೆ.

ಬಿಜೆಪಿ ಈ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾಗಿರುವುದರಿಂದ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾಗಿರುವ ಕೆ.ಎಸ್.ಈಶ್ವರಪ್ಪನವರೇ ಅಭ್ಯರ್ಥಿಯಾಗಿ ಹೊರಹೊಮ್ಮಬಹುದು ಎಂದು ಕೆ.ಎಸ್.ಈಶ್ವರಪ್ಪ ವಿರುದ್ಧ ಆಯನೂರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನಿರ್ಧರಿಸಲಾಗಿದೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವ ಬಗ್ಗೆ ಪ್ರಸ್ತಾಪವಿತ್ತು. ಆದರೆ ರಾಘವೇಂದ್ರರವರಿಗೆ ಟಿಕೆಟ್ ಕೊಡಬಹುದು ಎಂಬ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನೀಡಿರಲಿಲ್ಲ. ಹಾಗಾಗಿ ಬಿ.ವೈ.ರಾಘವೇಂದ್ರರವರು ಲೋಕಸಭೆ ಚುನಾವಣೆಗೆ ಸ್ಪರ್ಧೆಗಿಳಿಯುತ್ತಾರೆ ಎಂದು ಅಂದೆಯೇ ತೀರ್ಮಾನಿಸಲಾಗಿತ್ತು ಎಂದರು. 

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒಟ್ಟಾಗಿ ಸ್ಪರ್ಧಿಸುವ ಸಾಧ್ಯತೆಗಳು ಕಂಡುಬರುತ್ತಿವೆ. ಈ ಕಾರಣದಿಂದ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಅಖಾಡಕ್ಕಿಳಿಸಬೇಕಾಗಿದೆ ಎಂದು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಬಂದ್ ಸರಿಯಲ್ಲ: ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಆರ್.ರುದ್ರೇಗೌಡರವರು ಮಾತನಾಡಿ, 'ಕಾಂಗ್ರೆಸ್ ಪಕ್ಷವು ಭಾರತ್ ಬಂದ್‍ಗೆ ಕರೆ ನೀಡಿರುವ ಕ್ರಮವು ರಾಜಕೀಯ ಪ್ರೇರಿತವಾಗಿದೆ. ಜನ ಪರವಾದ ಯಾವುದೇ ಹಿತಾಸಕ್ತಿಯೂ ಕಂಡುಬರುತ್ತಿಲ್ಲ' ಎಂದು ದೂರಿದರು. 

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅತ್ಯಂತ ಸಮರ್ಥವಾಗಿ ದೇಶವನ್ನು ಮುನ್ನಡೆಸುತ್ತಿದೆ. ಉತ್ತಮ ಆಡಳಿತ ನೀಡುತ್ತಿದೆ. ಸರ್ಕಾರದ ಜನಪ್ರಿಯತೆ ಸಹಿಸದ ಕಾಂಗ್ರೆಸ್ ಪಕ್ಷವು, ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬಂದ್ ನಾಟಕ ನಡೆಸುವ ಮೂಲಕ ಜನರಿಗೆ ಕಿರಿಕಿರಿ ಉಂಟು ಮಾಡಲು ಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News