ಹನೂರು: ಭಾರತ್ ಬಂದ್‍ಗೆ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ

Update: 2018-09-10 16:55 GMT

ಹನೂರು,ಸೆ.10: ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕರೆ ನೀಡಿದ್ದ ಭಾರತ್ ಬಂದ್‍ಗೆ ಹನೂರು ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಪಟ್ಟಣದಾದ್ಯಂತ ಬೆಳಗ್ಗೆಯಿಂದಲೇ ಕಾಂಗ್ರೆಸ್ ಮುಖಂಡರು, ಯುವ ಕಾಂಗ್ರೆಸ್‍ ಪದಾಧಿಕಾರಿಗಳು, ಅಂಗಡಿ ಮಾಲಕರ ಮನವೊಲಿಸಿ ಬಾಗಿಲು ಮುಚ್ಚಿಸುವುದರೊಂದಿಗೆ ವ್ಯಾಪಾರಸ್ಥರು, ಸಾರ್ವಜನಿಕರು, ಬಸ್ ಮಾಲಕರು ತಮ್ಮ ದಿನ ನಿತ್ಯದ ವಹಿವಾಟುಗಳನ್ನು ಸ್ಥಗಿತಗೊಳಿಸಿ ಭಾರತ್ ಬಂದ್‍ಗೆ ಉತ್ತಮ ಬೆಂಬಲ ಪ್ರತಿಕ್ರಿಯೆ ನೀಡಿದರು. 

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಶಾಸಕ ನರೇಂದ್ರ ಜೊತೆಗೂಡಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಸಾರ್ವಜನಿಕರು ಮಾನವ ಸರಪಳಿಯನ್ನು ನಿರ್ಮಿಸಿ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಮಾತನಾಡಿದ ಶಾಸಕರು ನಿರಂತರವಾಗಿ ಹೆಚ್ಚುತ್ತಿರುವ ಇಂಧನ ಬೆಲೆಯ ನಿಯಂತ್ರಣದ ಕುರಿತು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಹೆಚ್ಚಳದಿಂದ ಮಧ್ಯಮ ವರ್ಗ ಮತ್ತು ರೈತಾಪಿ ಜನರ ಜೀವನದ ಮೇಲೆ ದುಷ್ಪಾರಿಣಾಮ ಬೀರುತ್ತಿದ್ದು, ಕೂಡಲೇ ಕೇಂದ್ರ ಸರ್ಕಾರ ತೈಲ ದರ ನಿಯಂತ್ರಣ ಮಾಡುವಂತೆ ಆಗ್ರಹಿಸಿದರು.

ಈ ಸಂದರ್ಭ ಜಿಪಂ ಅಧ್ಯಕ್ಷೆ ಶಿವಮ್ಮ, ಸದಸ್ಯೆಯರಾದ ಮರಗದಮಣಿ, ಲೇಖಾರವಿಕುಮಾರ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್‍ ಅಹಮದ್, ತಾಪಂ ಸದಸ್ಯ ನಟರಾಜು, ರಾಜೇಂದ್ರ, ಪಪಂ ಉಪಾಧ್ಯಕ್ಷ ಬಸವರಾಜು, ಮಾಜಿ ಅಧ್ಯಕ್ಷ ರಾಜುಗೌಡ, ಬಾಲರಾಜನಾಯ್ಡು, ಯೂತ್ ಕಾಂಗ್ರೆಸ್ ಅಧ್ಯಕ್ಷ ರಾಯಿಲ್, ಸತೀಶ್, ರಾಜು, ಮಾದೇಶ್, ಶಿವರಾಜ್ ಸೇರಿದಂತೆ ಹನೂರು ವರ್ತಕರ ಸಂಘದ ಅಧ್ಯಕ್ಷ ಜಯಪ್ರಕಾಶ್ ಗುಪ್ತ, ಮುಖಂಡರಾದ ಚಿಕ್ಕತಮಯ್ಯಗೌಡ, ವೆಂಕಟರಮಣನಾಯ್ಡು, ಮಹೇಶ್, ಮಹದೇವ, ಮಾದೇಶ್, ಸಿದ್ದರಾಜು, ಕೃಷ್ಣ (ಪಾಳ್ಯ), ಗಿರೀಶ್ ಆನಂದ್, ನಟರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News