ಕೊಳ್ಳೇಗಾಲ: ಭಾರತ್‍ ಬಂದ್ ಗೆ ಪಟ್ಟಣದಲ್ಲಿ ವ್ಯಾಪಕ ಬೆಂಬಲ

Update: 2018-09-10 18:30 GMT

ಕೊಳ್ಳೇಗಾಲ,ಸೆ.10: ತೈಲ ಬೆಲೆ ಏರಿಕೆ ಖಂಡಿಸಿ ಎಐಸಿಸಿ ಕರೆ ನೀಡಿದ್ದ ಭಾರತ್‍ ಬಂದ್ ಗೆ ಪಟ್ಟಣದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಹೋಟೆಲ್‍ಗಳು, ಚಿತ್ರಮಂದಿರಗಳು, ಅಂಗಡಿ ಮಳಿಗೆಗಳು ಸಂಪೂರ್ಣವಾಗಿ ಮುಚ್ಚಿತ್ತು. ಲಾರಿ, ಕಾರು, ಆಟೋ ಸೇರಿದಂತೆ ಸಾರಿಗೆ ಬಸ್‍ಗಳು ರಸ್ತೆಗೆ ಇಳಿಯದೆ ಬಂದ್ ಗೆ ಬೆಂಬಲ ನೀಡಿತು.

ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಸಾವಿರಾರು ಮಂದಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ  ಬೈಕ್‍ರ್ಯಾಲಿ ನಡೆಸಿ ನಂತರ ಬಿಎಸ್‍ಎನ್‍ಎಲ್ ಕಚೇರಿಯ ಮುಂಭಾಗ ಕುಳಿತು ಪ್ರತಿಭಟಿಸಿದರು.

ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ, ಅನಿಲ ಬೆಲೆ ಏರಿಕೆ ವಿರುದ್ಧ ಕಾಂಗ್ರೇಸ್ ಕರೆ ನೀಡಿದ್ದ ಬಂದ್‍ಗೆ ಸರ್ವರೂ ಕೂಡ ಭಾಗವಹಿಸುವ ಮೂಲಕ ಬಂದ್‍ ಯಶಸ್ವಿಗೊಂಡಿದೆ. ಪಟ್ಟಣದ ವರ್ತಕರ ಸಂಘ, ಲಾರಿ, ಬಸ್, ಕಾರು ಚಾಲಕರು ಮತ್ತು ಮಾಲಕರು ಸೇರಿದಂತೆ ಇನ್ನೀತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಬಂದ್‍ಗೆ ಸಹಕರಿಸಿದ್ದಾರೆ ಎಂದರು.

ಕಳೆದ ಅವಧಿಯಲ್ಲಿ ಮನಮೋಹನ್‍ ಸಿಂಗ್‍ ಪ್ರಧಾನಿಯಾಗಿದ್ದ ಸಂದರ್ಭ ತೈಲ ಬೆಲೆ ನಿಯಂತ್ರಣದಲ್ಲಿತ್ತು. ಆದರೆ ಕಳೆದ 4 ವರ್ಷದಲ್ಲಿ ದುಪ್ಪಟ್ಟುಗೊಂಡಿದೆ. ಯುಪಿಐ ಸರ್ಕಾರದಲ್ಲಿ ಶೇ.40 ರಷ್ಟು ಬೆಲೆ ಇದ್ದರೆ, ಬಿಜೆಪಿ ಆಡಳಿತದಲ್ಲಿ ಶೇ. 80 ರಷ್ಟು ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಬಡಜನರು ಜೀವನ ನಡೆಸಲು ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಸ್.ಜಯಣ್ಣ ಮಾತನಾಡಿ, ಜನಸಾಮಾನ್ಯರು ಬಳಸುವ ತೈಲ, ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಬಂದ್ ಮಾಡಲಾಗಿದೆ. ಬಡವರ ಹಿತದೃಷ್ಟಿಯಿಂದ ಏರಿಕೆಗೊಂಡ ಬೆಲೆಗಳನ್ನು ನಿಯಂತ್ರಣಗೊಳಿಸಬೇಕು ಎಂದು ಒತ್ತಾಯ ಮಾಡಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚೇತನ್‍ದೊರೆ, ಅಬ್ದುಲ್ ಮುಖಂಡ ಕಿನಕಹಳ್ಳಿ ರಾಚಯ್ಯ, ನಗರಸಭೆ ಸದಸ್ಯ ರಾಘವೇಂದ್ರ, ಮಂಜುನಾಥ್, ಕಾಂಗ್ರೆಸ್ ಎಸ್‍ಸಿ ಘಟಕದ ಜಿಲ್ಲಾಧ್ಯಕ್ಷ ನಾಗರಾಜು, ಮುಡಿಗುಂಡ ಶಾಂತರಾಜು, ಅಕ್ಮಲ್, ಗೋವಿಂದ, ಕರ್ನಾಟಕ ನವನಿರ್ಮಾಣ ವೇದಿಕೆಯ ಚಿನ್ನಸ್ವಾಮಿ ಮಾಳಿಗೆ, ಲಂಚ ಮುಕ್ತ ವೇದಿಕೆಯ ಮಾಂಬಳ್ಳಿಮೋಹನ್, ಮುಸ್ತಾಕ್, ಪ್ರಭಾಕರ್, ಸ್ವಾಮಿನಂಜಪ್ಪ, ಅನ್ಸಾರ್, ಯುವಶಕ್ತಿ ವೇದಿಕೆಯ ಆನಂದ್, ರೈತ ಮುಖಂಡ ಅಣಗಳ್ಳಿ ಬಸವರಾಜು, ಭೀಮನಗರದ ಮುಖಂಡರಾದ ಸೋಮು, ಲಾರ್, ರಾಚಪ್ಪ, ಖಾಸಗಿ ಬಸ್‍ ಮಾಲಕರ ಸಂಘದ ಅಧ್ಯಕ್ಷ ಅನ್ವರ್, ಕುಮಾರಸ್ವಾಮಿ, ಪುನೀತ್ ,ಕಾರು ಮಾಲಕರು, ಚಾಲಕರು, ವರ್ತಕರ ಸಂಘದ ಮಾಲಕರು ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಭಾಗವಹಿಸಿದ್ದವು.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News