ತೆಲಂಗಾಣದ ಬದಲು ಉತ್ತರ ಪ್ರದೇಶವನ್ನು ವಿಭಜನೆ ಮಾಡಿದ್ದರೆ....

Update: 2018-09-10 18:33 GMT

ಮಾನ್ಯರೇ,

ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ ರಾವ್ (ಕೆಸಿಆರ್) ವಿಪರೀತ ಮೂಢನಂಬಿಕೆ ಇರುವ ವ್ಯಕ್ತಿ. ಅವರು ಮೂಢನಂಬಿಕೆಗೆ ಬಲಿಯಾಗಿ ಜ್ಯೋತಿಷಿಗಳ ಸಲಹೆಯಂತೆ ಸೆಪ್ಟಂಬರ್ 6ಕ್ಕೆ ವಿಧಾನಸಭೆ ವಿಸರ್ಜಿಸಿ ಮುಂದಿನ ತಿಂಗಳ 6ನೇ ತಾರೀಕಿಗೆ ಚುನಾವಣೆ ನಡೆಸಲು ಸಲಹೆ ಕೊಟ್ಟಿದ್ದಾರಂತೆ. ಸಂಖ್ಯೆ-6 ಇದು ಕೆಸಿಆರ್‌ಗೆ ಲಕ್ಕಿ ಎಂದು ಯಾರೋ ಜ್ಯೋತಿಷಿ ಅವರಿಗೆ ಹೇಳಿರುವನಂತೆ. ಕೆಸಿಆರ್ ತೆಲಂಗಾಣದ ಮುಖ್ಯಮಂತ್ರಿ ಆದ ಮೇಲೆ ಕೇವಲ ಯಜ್ನಯಾಗ, ಹೋಮ ಹವನ ಪೂಜೆ ಮುಂತಾದವುಗಳಿಗೆ ಹದಿನೈದು ಕೋಟಿ ರೂ. ತೆರಿಗೆದಾರರ ಅಮೂಲ್ಯ ಹಣ ಖರ್ಚು ಮಾಡಿದ್ದಾರೆ. ಅಷ್ಟೇ ಅಲ್ಲ ಹೈದರಾಬಾದಿನ ವಿಧಾನಸಭೆಯ ವಾಸ್ತು ಬದಲಿಸಲು ಸುಮಾರು 100 ಕೋಟಿ ರೂ. ನೀರಿನಲ್ಲಿ ಹೋಮ ಮಾಡಿದ್ದಾರೆ. ವಾಸ್ತುಶಾಸ್ತ್ರಕ್ಕಾಗಿ ಒಂದು ಪ್ರತ್ಯೇಕ ಮಂತ್ರಿ ಹಾಗೂ ಅನೇಕ ವಾಸ್ತು ಪಂಡಿತ ಮತ್ತು ಜ್ಯೋತಿಷಿಗಳನ್ನು ಸೆಕ್ರೆಟರಿಗಳನ್ನಾಗಿ ನೇಮಕ ಮಾಡಿದ್ದಾರೆ. ಕಾಂಗ್ರೆಸ್ಸಿನ ರಾಹುಲ್ ಗಾಂಧಿಗೆ ವಿದೂಷಕ ಅನ್ನುವ ಮೊದಲು ಕೆಸಿಆರ್ ತಾನೇ ಬಹುದೊಡ್ಡ ಮೂಢ ಅನ್ನುವ ಮಾತು ನೆನಪಿಡಬೇಕು. ಕಾಂಗ್ರೆಸ್ ಪಕ್ಷದಿಂದಾಗಿಯೇ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಆಯಿತು. ಇಲ್ಲದಿದ್ದರೆ ಇನ್ನೂ 50 ವರ್ಷ ಕಳೆದಿದ್ದರೂ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಈ ವಿಷಯಕ್ಕಾದರೂ ಕೆಸಿಆರ್ ಕಾಂಗ್ರೆಸ್‌ಗೆ ಋಣಿಯಾಗಿರಬೇಕು. ಆಂಧ್ರ ಪ್ರದೇಶವನ್ನು ವಿಭಾಗಿಸುವ ಬದಲು ಆಂಧ್ರಕ್ಕಿಂತ ಮೂರು ಪಟ್ಟು ಹೆಚ್ಚು ಜನಸಂಖ್ಯೆ ಇರುವ ಬೃಹತ್ ಉತ್ತರ ಪ್ರದೇಶವನ್ನು ಮಾಯಾವತಿಯವರ ಸಲಹೆಯಂತೆ ನಾಲ್ಕು ರಾಜ್ಯವಾಗಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ 2013-14 ರಲ್ಲಿ ವಿಭಾಗಿಸಿದ್ದರೆ ಇಂದು ಸಮಸ್ತ ದೇಶದ ರಾಜಕೀಯ ಚಿತ್ರಣವೇ ಬೇರೆಯಾಗಿರುತ್ತಿತ್ತು. ವಿಕ್ಷಿಪ್ತ ಯೋಗಿಯ ಕೈಯಲ್ಲಿ ಉ.ಪ್ರ. ರಾಜ್ಯದ 23 ಕೋಟಿ ಜನರ ಭವಿಷ್ಯ ಅಪಾಯದಲ್ಲಿ ಇರುತ್ತಿರಲಿಲ್ಲ. 2014ರ ಲೋಕಸಭೆಗೆ ಉತ್ತರ ಪ್ರದೇಶದಿಂದ ಒಂದೇ ಪಕ್ಷದ 72 ಸಂಸದರು ಗೆಲ್ಲುತ್ತಿರಲಿಲ್ಲ ಹಾಗೂ ಅರೆ-ಸಾಕ್ಷರ ಗುಜರಾತಿಯೊಬ್ಬ ಪ್ರಧಾನಿಯಾಗಿ ದೇಶದ ಆರ್ಥಿಕ ಸ್ಥಿತಿಯನ್ನು ಪ್ರಪಾತಕ್ಕೆ ದೂಡಲು ಆಗುತ್ತಿರಲಿಲ್ಲ. ಕಾಂಗ್ರೆಸ್ ತನ್ನ 2019ರ ಚುನಾವಣಾ ಪ್ರಣಾಳಿಕೆಯಲ್ಲಾದರೂ ಉತ್ತರ ಪ್ರದೇಶವನ್ನು ನಾಲ್ಕು ರಾಜ್ಯಗಳಾಗಿ ವಿಭಾಗಿಸುವ ಅಜೆಂಡಾವನ್ನು ಸೇರಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಂಪರ್ ಲಾಭ ಖಂಡಿತ.

Writer - ರಾಮಕೃಷ್ಣ. ಎ. ಕೆ ಬೆಂಗಳೂರು

contributor

Editor - ರಾಮಕೃಷ್ಣ. ಎ. ಕೆ ಬೆಂಗಳೂರು

contributor

Similar News