ಅಸ್ಸಾಂ: ತಾಯಿಯ ಪೌರತ್ವ ಪ್ರಕರಣ ಹೋರಾಟಕ್ಕೆ ಹಣವಿಲ್ಲದೇ ಆತ್ಮಹತ್ಯೆಗೈದ ಪುತ್ರ

Update: 2018-09-11 07:58 GMT

ಗುವಹಾಟಿ, ಸೆ.11: ವಿವಾದಿತ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್(ಎನ್.ಆರ್.ಸಿ.)ನಲ್ಲಿ ತನ್ನ ತಾಯಿಯ ಹೆಸರು ಸೇರ್ಪಡೆಯಾಗಿಲ್ಲ ಎಂದು ತೀವ್ರ ನೊಂದು 37 ವರ್ಷದ ಅಸ್ಸಾಂನ ಬಿನೊಯ್ ಚಂದ್ ಎಂಬಾತ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಸ್ಸಾಂ ಮತದಾರರ ಪಟ್ಟಿಯಲ್ಲಿ ಆತನ ತಾಯಿಯನ್ನು ‘ಸಂಶಯಿತ’ ಅಥವಾ ‘ಡಿ-ಮತದಾರೆ’ ಎಂದು ಪರಿಗಣಿಸಲ್ಪಟ್ಟಂದಿನಿಂದ ಫಾರಿನರ್ಸ್ ಟ್ರಿಬ್ಯುನಲ್ ನಲ್ಲಿ ಕಾನೂನು ಹೋರಾಟಕ್ಕೆ ಆತ ತನ್ನಲ್ಲಿದ್ದ ಎಲ್ಲಾ ಹಣ ವ್ಯಯಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ತೀವ್ರವಾಗಿ ನೊಂದಿದ್ದ ಬಿನೊಯ್ ಹೈಕೋರ್ಟ್ ಮೆಟ್ಟಿಲೇರಬೇಕೆಂದು ಮನಸ್ಸು ಮಾಡಿದ್ದರೂ ಆತನ ಕೈಯಲ್ಲಿ ಹಣವಿಲ್ಲದೇ ಇದ್ದಿದ್ದು ಸಮಸ್ಯೆಯಾಗಿತ್ತು.

ಆತ್ಮಹತ್ಯೆಗೈದ ಬಿನೊಯ್ ಚಂದ್ ಪತ್ನಿ 20 ದಿನಗಳ ಹಿಂದೆಯಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆತನ ಕುಟುಂಬ ಸದಸ್ಯರು ದಿನಗೂಲಿ ಕಾರ್ಮಿಕರಾಗಿರುವುದರಿಂದ ಹಾಗೂ ತಮ್ಮ ಅಲ್ಪ ಆದಾಯದಿಂದ ಜೀವನವನ್ನು ಕಷ್ಟಪಟ್ಟು ಸಾಗಿಸುತ್ತಿದ್ದರು. ಇದ್ದ ಹಣವನ್ನೂ ಕಳೆದುಕೊಂಡು ಆತ ಕಂಗಾಲಾಗಿದ್ದ ಎಂದು ಬಿನೊಯ್ ಚಂದ್ ತಾಯಿ ಶಾಂತಿ ಚಂದ್ ಹೇಳುತ್ತಾರೆ.

ಬಿನೊಯ್ ಚಂದ್ ಕುಟುಂಬಕ್ಕೆ 1960ರ ಭೂ ದಾಖಲೆಗಳಿವೆ ಹಾಗೂ ಪ್ರತಿ ಚುನಾವಣೆಯಲ್ಲೂ ಅವರು ಮತ ಚಲಾಯಿಸುತ್ತಾರಾದರೂ ಫಾರಿನರ್ಸ್ ಟ್ರಿಬ್ಯುನಲ್ ಅವರನ್ನು ಸಂಶಯಿತ ನಾಗರಿಕರೆಂದು ಬಣ್ಣಿಸಿರುವುದು ಕುಟುಂಬಕ್ಕೆ ದೊಡ್ಡ ಸಮಸ್ಯೆಯಾಗಿದೆ.

ಅಸ್ಸಾಂನ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ 1.25 ಲಕ್ಷ ಸಂಶಯಿತ ಮತದಾರರು ಅಥವಾ ಡಿ-ವೋಟರ್ಸ್ ಹೆಸರುಗಳನ್ನು ಕೈಬಿಟ್ಟಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News