ತಪ್ಪಿತಸ್ಥ ಅಧಿಕಾರಿಯನ್ನು ಅಮಾನತು ಮಾಡಿ ಮಂಗಳೂರು ಪೊಲೀಸರ ಮಾನ ಕಾಪಾಡಿ

Update: 2018-09-11 08:14 GMT
ಅಶ್ರಫ್ ಸಾಲೆತ್ತೂರು

ಅಶ್ರಫ್ ಸಾಲೆತ್ತೂರು ಎಂಬ ಸುಶಿಕ್ಷಿತ ಯುವಕನನ್ನು ಮಂಗಳೂರಿನ ಪೊಲೀಸರು ಅಮಾನವೀಯವಾಗಿ ನಡೆಸಿಕೊಂಡಿರುವುದನ್ನು ಓದಿ ಆಘಾತವಾಯಿತು. 
ಮೂಢನಂಬಿಕೆಯೊಂದನ್ನು ಪ್ರಶ್ನಿಸಿದರೆ ಆತನಿಗೆ ಮೆಚ್ಚುಗೆ ಸೂಚಿಸಬೇಕಾದ ಪೊಲೀಸರು, ಆತನ ವಿರುದ್ಧವೇ, ಅದೂ ಸ್ವಯಂಪ್ರೇರಿತವಾಗಿ ಕೇಸು ದಾಖಲಿಸಿ ಆತನನ್ನು ಹಬ್ಬದ ಹಿಂದಿನ ದಿನ ಕರೆದುಕೊಂಡು ಬಂದು ಬಟ್ಟೆ ಬಿಚ್ಚಿ ಕತ್ತಲಕೋಣೆಗೆ ದೂಡಿದ್ದಾರೆ ಎಂದರೆ ನಂಬಲಾಗುತ್ತಿಲ್ಲ. ಇದು ಯಾವುದಾದರೂ ಸುಸಂಸ್ಕೃತ, ನಾಗರಿಕ ಸಮಾಜದಲ್ಲಿ ನಡೆಯುವ ಘಟನೆಯೇ ? ಹೀಗೆ ಮಾಡಿದವರು ಆರಕ್ಷಕರೇ ? 

ಯಾವ ರೀತಿಯಲ್ಲಿ ಓದಿ ನೋಡಿದರೂ ಅಶ್ರಫ್ ಹಾಕಿರುವ ಫೇಸ್ಬುಕ್ ಪೋಸ್ಟ್ ನಲ್ಲಿ ಯಾರಿಗೂ ಯಾವುದೇ ರೀತಿ ಘಾಸಿಯಾಗುವ ಅಂಶಗಳಿಲ್ಲ. ಇನ್ನು ಯಾರೂ ಅದರ ವಿರುದ್ಧ ದೂರು ನೀಡಿಯೂ ಅಲ್ಲ. ಹಾಗಿರುವಾಗ ಮಂಗಳೂರು ಪೊಲೀಸರು ಅದ್ಯಾವ ಆಧಾರದಲ್ಲಿ ಇಂತಹದೊಂದು ಕ್ರಮ ಕೈಗೊಂಡರು ಎಂದು ಅರ್ಥಮಾಡಿಕೊಳ್ಳುವುದೇ ಕಷ್ಟ. ಖಂಡಿತ ಇದರಲ್ಲಿ ಯಾವುದೋ ಬಾಹ್ಯ ಶಕ್ತಿ ಕೆಲಸ ಮಾಡಿದೆ. ಪೊಲೀಸ್ ಅಧಿಕಾರಿ ಆ ಬಾಹ್ಯ, ಸಂವಿಧಾನೇತರ ಶಕ್ತಿಯ ಪ್ರಭಾವಕ್ಕೆ ಒಳಗಾಗಿ ಮಣಿದಿದ್ದಾರೆ. ಕುಟುಂಬಕ್ಕೆ ಆಸರೆಯಾಗುವ, ಸಮಾಜಕ್ಕೆ ಕೊಡುಗೆ ನೀಡುವ ಯುವಕನೊಬ್ಬನ ಬದುಕಿನ ಜೊತೆ ಚೆಲ್ಲಾಟವಾಡಿದ್ದಾರೆ.

ಪೊಲೀಸ್ ದೌರ್ಜನ್ಯದ ಸಂದರ್ಭದಲ್ಲಿ ಆ ಯುವಕ ಎದುರಿಸಿದ ಮಾನಸಿಕ ಹಿಂಸೆಯನ್ನು ಊಹಿಸಿಕೊಂಡರೆ ನನ್ನ ಮೈ ನಡುಗುತ್ತದೆ. ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ಕ್ರಮ ಕೈಗೊಳ್ಳುವುದಾದರೆ ಮಂಗಳೂರಿನಲ್ಲಿ ಒಂದು ಪ್ರತ್ಯೇಕ ಪೊಲೀಸ್ ಠಾಣೆ ಕೇವಲ ಸೋಷಿಯಲ್ ಮೀಡಿಯಾಕ್ಕೆ ಮೀಸಲಿಡಬೇಕಾಗಬಹುದು. ಅಷ್ಟು ಕೋಮುವಾದಿ, ಮತಾಂಧ, ಸಂವಿಧಾನ ವಿರೋಧಿ ಪೋಸ್ಟ್ ಗಳನ್ನು ಫೇಸ್ ಬುಕ್ ನಲ್ಲಿ ನಾವು ನೋಡುತ್ತಲೇ ಇರುತ್ತೇವೆ. 

ಇಂತಹ ಅನ್ಯಾಯ ಮಾಡಿರುವ ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಲೇಬೇಕು. ಅದು ಇಡೀ ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾದರಿಯಾಗಬೇಕು. ತಪ್ಪು ಮಾಡದವನನ್ನು ತಂದು ಶಿಕ್ಷಿಸುವ ಪೊಲೀಸ್ ವ್ಯವಸ್ಥೆ ನಮ್ಮದಲ್ಲ. ನಮ್ಮ ರಾಜ್ಯದ ಪೊಲೀಸರ ಬಗ್ಗೆ ಈವರೆಗೆ ಒಳ್ಳೆಯ ಮಾತುಗಳನ್ನು ಕೇಳಿದ್ದೇವೆ. ಈಗ ಮಂಗಳೂರಿನ ಬಂದರ್ ಪೊಲೀಸರು ಮಾಡಿರುವುದು ಯಾವುದೋ ಗೂಂಡಾರಾಜ್ ನಲ್ಲಿ ಮಾತ್ರ ನಡೆಯಬಹುದಾದ ದೌರ್ಜನ್ಯ. ಮಂಗಳೂರಿನ ಪೊಲೀಸ್ ಕಮಿಷನರ್, ಅಲ್ಲಿಯ ಎಸ್ಪಿ, ಐಜಿಪಿ ಇತ್ಯಾದಿ ವರಿಷ್ಠ ಅಧಿಕಾರಿಗಳು ಜನಪರವಾಗಿ ಕೆಲಸ ಮಾಡುತ್ತಾ ಬಂದವರು. ಈಗ ಒಬ್ಬ ಅಧಿಕಾರಿಯ ಪಕ್ಷಪಾತಿ ಕಾರ್ಯವೈಖರಿಯಿಂದ ಈ ಅಧಿಕಾರಿಗಳು ಪ್ರಶ್ನೆ ಎದುರಿಸುವಂತಾಗಿದೆ. ರಾಷ್ಟ್ರಮಟ್ಟದಲ್ಲಿ ಮಂಗಳೂರಿನ, ಕರ್ನಾಟಕದ ಪೊಲೀಸರ ಬಗ್ಗೆ ಕೆಟ್ಟ ಹೆಸರು ಬರುವಂತಾಗಿದೆ. ಹಾಗಾಗಿ ಈ ಹಿರಿಯ ಪೊಲೀಸ್ ಅಧಿಕಾರಿಗಳು ಅಶ್ರಫ್ ವಿರುದ್ಧ ಅಮಾನವೀಯವಾಗಿ ವರ್ತಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವ ಮೂಲಕ ಇಲಾಖೆಯ ಮೇಲೆ ಜನರು ಇಟ್ಟುಕೊಂಡಿರುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕು. 

Writer - ಅನಂತಕೃಷ್ಣ, ಮೈಸೂರು

contributor

Editor - ಅನಂತಕೃಷ್ಣ, ಮೈಸೂರು

contributor

Similar News