ತೆಲಂಗಾಣ: ಕಮರಿಗೆ ಉರುಳಿ ಬಿದ್ದ ಬಸ್; ಸಾವಿನ ಸಂಖ್ಯೆ 52ಕ್ಕೇರಿಕೆ

Update: 2018-09-11 13:35 GMT

ಹೈದರಾಬಾದ್, ಸೆ.11: ರಾಜ್ಯ ಸರಕಾರಿ ಸ್ವಾಮ್ಯದ ಬಸ್ ಘಾಟಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದ ಘಟನೆಯಲ್ಲಿ 4 ಮಕ್ಕಳು ಸಹಿತ 52 ಮಂದಿ ಯಾತ್ರಿಕರು ಮೃತಪಟ್ಟಿದ್ದರೆ, ಹಲವು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಈ ಘಟನೆಯು ತೆಲಂಗಾಣ ರಾಜ್ಯದ ಜಗಿಟಿಯಲ್ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದೆ. ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಯಾತ್ರಿಕರು ಕೊಂಡಗಟ್ಟು ಬೆಟ್ಟದಲ್ಲಿರುವ ಪ್ರಸಿದ್ಧ ಹನುಮಾನ್ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಬಸ್ 70ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು.

 ಮಂಗಳವಾರ ಬೆಳಗ್ಗೆ 11:30ರ ಸುಮಾರಿಗೆ ಬಸ್ ಚಾಲಕ ಘಾಟಿಯಲ್ಲಿ ತಿರುವು ಪಡೆಯುತ್ತಿದ್ದಾಗ ಬ್ರೇಕ್ ವೈಫಲ್ಯಗೊಂಡು ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸುಮಾರು 10 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ರಕ್ಷಣಾಕಾರ್ಯದಲ್ಲಿ ನೆರವಾಗಿದ್ದಾರೆ. ಜಿಲ್ಲಾಧಿಕಾರಿ ಶರತ್ ಹಾಗೂ ಎಸ್ಪಿ ಸಿಂಧು ಶರ್ಮಾ ಪೊಲೀಸ್ ಪಡೆಯೊಂದಿಗೆ ಘಟನಾಸ್ಥಳಕ್ಕೆ ಧಾವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮೃತ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News