ವಿವೇಕಾನಂದರ ತತ್ವಾದರ್ಶಗಳನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕು: ಚಿಕ್ಕಮಗಳೂರು ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ

Update: 2018-09-11 13:40 GMT

ಚಿಕ್ಕಮಗಳೂರು, ಸೆ.11: ಶ್ರೇಷ್ಠ ಮಾನವತಾವಾದಿ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಯುವ ಜನರು ಮೈಗೂಡಿಸಿಕೊಳ್ಳುವುದರೊಂದಿಗೆ ದೇಶ ಕಟ್ಟಲು ಮುಂದಾಗಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಕರೆ ನೀಡಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ವಿವೇಕಾನಂದರು ಪ್ರತಿಪಾದಿಸಿದ ಜೀವನ ಮೌಲ್ಯಗಳನ್ನು ಯುವಜನರಿಗೆ ಹಾಗೂ ಸಾರ್ವಜನಿಕರಿಗೆ ತಲುಪಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಡು ಕಂಡ ಶ್ರೇಷ್ಠ ಮಾನವತಾವಾದಿಗಳಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು. ಅವರು ಚಿಂತನೆಗಳ ಮೂಲಕ ಮಾನವ ಲೋಕದ ಆಲೋಚನೆಗಳನ್ನು ಬದಲಿಸಿದರು. ಇವರ ತತ್ವಾದರ್ಶಗಳನ್ನು ಯುವ ಜನರು ಅನುಸರಿಸುವುದರೊಂದಿಗೆ ದೇಶ ಕಟ್ಟುವ ಕೆಲಸದಲ್ಲಿ ಮುಂದಾಗಬೇಕು. ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ಮುಂದೊಂದು ದಿನ ಭಾರತವು ವಿಶ್ವದಲ್ಲಿಯೇ ಮುಂಚೂಣಿಯಲ್ಲಿರುತ್ತದೆ ಎಂಬ ಮಾತು ನನಸಾಗುವ ದಿನ ಬರುತ್ತಿದೆ. ಯುವ ಜನರು ದೇಶ ಕಟ್ಟುವುದರಲ್ಲಿ ಉತ್ಸುಕರಾಗಬೇಕು ಎಂದರು.

ಶಾರದಾ ಮಠದ ಮಾತಾಜಿ ಮಾತನಾಡಿ, ಸ್ವಾಮಿ ವಿವೇಕಾನಂದರ ಹೃದಯವು ಬಡಜನರ ಉದ್ಧಾರ ಹಾಗೂ ಭಾರತ ದೇಶದ ಪ್ರಗತಿಗೆ ಮಿಡಿಯುತ್ತಿತ್ತು . ಬೇರೆಯವರ ಸುಖ ಸಂತೋಷಕ್ಕಾಗಿ ನಮ್ಮ ಸಮಯವನ್ನು ಮುಡಿಪಾಗಿ ಇಟ್ಟುಕೊಳ್ಳಬೇಕು ಎಂದು ಸಹ ಅವರು ತಿಳಿಸಿದ್ದರು ಎಂದು ನೆನೆದರು.

ಕನ್ನಡದ ಪೂಜಾರಿ ಕಣ್ಣನ್ ಅವರು ವಿಶೇಷ ಉಪನ್ಯಾಸ ನೀಡಿ, ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ ಎಂಬುದನ್ನು ಸ್ವಾಮಿ ವಿವೇಕಾಂದರು ತಮ್ಮ ನಡೆ ನುಡಿಗಳ ಮೂಲಕ ವಿಶ್ವಕ್ಕೆ ತೋರಿಸಿಕೊಟ್ಟರು. ಅವರ ಸರಳತೆ ಬಡ ಜನರ ಮೇಲಿದ್ದ ದಯೆ, ದೇಶ ಪ್ರೇಮ ಅನನ್ಯ. ನಗರದ ಬಸವನಹಳ್ಳಿ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ನರಸಿಂಗ ಪೆರುಮಾಳ್‍ರವರು ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಸಹಕಾರಿಯಾಗಿದ್ದರು ಎಂದರು. 

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಮಿ ವಿವೇಕಾನಂದರ ಸಂದೇಶಗಳು ಸರ್ವ ಕಾಲಕ್ಕೂ ಅನುಕರಣೆ ಮಾಡುವಂತವುಗಳಾಗಿದ್ದು, ಅವುಗಳನ್ನು ಯುವ ಜನರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಎಂದ ಅವರು ಯುವ ಜನರು ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಅನುಕರಣೆ ಮಾಡುವುದರೊಂದಿಗೆ ಉತ್ತಮ ನಾಗರಿಕರಾಗಬೇಕೆಂದರು.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News